ಕಳವು ಪ್ರಕರಣ: ನಾಲ್ವರ ಬಂಧನ
ಬೆಂಗಳೂರು, ಆ.19: ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ ಪ್ರಕರಣ ಸಂಬಂಧ ನಾಲ್ವರನ್ನು ಇಲ್ಲಿನ ವಿಜಯನಗರ ಠಾಣಾ ಪೊಲೀಸರು ಬಂಧಿಸಿ 22.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಖ್ಯಾತ ಆರೋಪಿ: ಕಳವು ಪ್ರಕರಣ ಸಂಬಂಧ 2005ರಿಂದಲೂ ತಲೆಮರೆಸಿಕೊಂಡಿದ್ದ ಅಂದ್ರಹಳ್ಳಿಯ ವಿದ್ಯಮಾನ ನಗರದ ವಿಜಯಸಿಂಹ ಯಾನೆ ರವಿಕುಮಾರ್ (41)ನನ್ನು ಬಂಧಿಸಿ, 16.50 ಲಕ್ಷ ರೂ. ಮೌಲ್ಯದ 650 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಶ್ಚಿಮ ವಲಯ ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.
ಕೃತ್ಯ ನಡೆದ ಸ್ಥಳದಲ್ಲೆ ದೊರೆತ ಬೆರಳಚ್ಚು ಆಧರಿಸಿ ವಿಜಯಸಿಂಹ ಬಂಧಿಸಲಾಗಿದೆ. ಆರೋಪಿಯು ವಿಜಯನಗರದ ನಾಲ್ಕು, ವೈಯಾಲಿಕಾವಲ್, ಹನುಮಂತನಗರದ ತಲಾ ಮೂರು, ಬಸವೇಶ್ವರ ನಗರ, ಚನ್ನಮ್ಮನ ಕೆರೆ, ಬಸವನಗುಡಿ ತಲಾ ಒಂದು ಸೇರಿದಂತೆ 14ಕ್ಕೂ ಹೆಚ್ಚು ಕನ್ನಗಳವು ಕೃತ್ಯಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದರು.
ಮೂವರ ಬಂಧನ: ಬಂಧಿತ ವಿಜಯಸಿಂಹ ಕಳವು ಮಾಡಿದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಚಿನ್ನಾಭರಣ ಅಂಗಡಿಗಳಲ್ಲಿ ಮಾರಾಟ ಇಲ್ಲವೆ, ಗಿರಿವಿ ಇಟ್ಟು ಐಷಾರಾಮಿ ಜೀವನ ನಡೆಸುತ್ತಿದ್ದ. ಹಗಲು ವೇಳೆಯೇ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನಗಳವು ಮಾಡುವುದರಲ್ಲಿ ಕುಖ್ಯಾತಿ ಪಡೆದಿದ್ದ. ಈತನ ಜೊತೆಗೆ ಮೋಜಿನ ಜೀವನಕ್ಕಾಗಿ ಸರಗಳವು ಮಾಡುತ್ತಿದ್ದ ಚಾಮರಾಜಪೇಟೆಯ ಸೈಯದ್ ಪಿಟ್ಟು(25), ಹಳೆ ಪೆಂಕ್ಷನ್ ಮೊಹಲ್ಲಾದ ಶಾರುಕ್(24), ಸಲೀಂ (25) ಎಂಬುವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.







