ಹಿರಿಯ ವಿಜ್ಞಾನಿಯಿಂದ ಲೈಂಗಿಕ ಕಿರುಕುಳ: ವಿದ್ಯಾರ್ಥಿನಿಯರ ಆರೋಪ
ಪೊಲೀಸ್ ಆಯುಕ್ತರಿಗೆ ದೂರು
ಬೆಂಗಳೂರು, ಆ.19: ಮಾರತ್‌ಹಳ್ಳಿಯ ಸಿಐಎಸ್‌ಆರ್ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ನಾಲ್ವರು ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿಯರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ಅವರಿಗೆ ದೂರು ನೀಡಿದ್ದಾರೆ.
ಕೇರಳ ಮೂಲದ ನಾಲ್ವರು ವಿದ್ಯಾರ್ಥಿನಿಯರು ನೀಡಿರುವ ದೂರನ್ನು ಮಾರತ್‌ಹಳ್ಳಿ ಪೊಲೀಸರಿಗೆ ವರ್ಗಾಯಿಸಲಾಗಿದ್ದು, ಪ್ರಕರಣ ದಾಖಲಿಸಿರುವ ಮಾರತ್‌ಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದ ನಾಲ್ವರು ವಿದ್ಯಾರ್ಥಿನಿಯರಿಗೆ ಸಂಶೋಧನಾ ಕೇಂದ್ರದಲ್ಲಿ ಹಿರಿಯ ವಿಜ್ಞ್ಞಾನಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದು, ಈ ಸಂಬಂಧ ವಿದ್ಯಾರ್ಥಿನಿಯರು ಸಂಶೋಧನಾ ಕೇಂದ್ರದ ಮುಖ್ಯಸ್ಥರಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.
ತಮ್ಮ ವಿಭಾಗದ ಸಮನ್ವಯಾಧಿಕಾರಿಯಾಗಿರುವ ಹಿರಿಯ ವಿಜ್ಞ್ಞಾನಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದಾಖಲಿಸಿದ ದೂರನ್ನು ಪರಿಶೀಲಿಸಿದ ಸಂಶೋಧನಾ ಕೇಂದ್ರದ ಮುಖ್ಯಸ್ಥರು ಆಂತರಿಕ ತನಿಖೆ ನಡೆಸಿದಾಗ ಅದರಲ್ಲಿ ಸತ್ಯಾಂಶ ವಿಲ್ಲದಿರುವುದು ಪತ್ತೆಯಾಗಿತ್ತು. ಅದನ್ನು ವಿದ್ಯಾರ್ಥಿನಿಯರಿಗೆ ತಿಳಿಸಲಾಗಿತ್ತು. ಇದಕ್ಕೆ ಆಕ್ರೋಶಗೊಂಡಿರುವ ವಿದ್ಯಾರ್ಥಿನಿಯರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವುದಾಗಿ ತಿಳಿದುಬಂದಿದೆ.







