ಮೊದಲು ಯಡಿಯೂರಪ್ಪ ಜೈಲಿಗೆ ಹೋಗುವುದರಿಂದ ತಪ್ಪಿಸಿಕೊಳ್ಳಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಆ. 19: ‘ನನ್ನನ್ನು ಕಾರಾಗೃಹಕ್ಕೆ ಕಳುಹಿಸುವ ಮೊದಲು ಅವರು ಜೈಲಿಗೆ ಹೋಗುವುದರಿಂದ ತಪ್ಪಿಸಿಕೊಳ್ಳಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಸವಾಲು ಹಾಕಿದ್ದಾರೆ.
ಶನಿವಾರ ಇಲ್ಲಿನ ವಸಂತ ನಗರದಲ್ಲಿ ನಡೆದ ಸಮಾರಂಭದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಹತಾಶೆಯಿಂದ ಯಡಿಯೂರಪ್ಪ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ರಾಜ್ಯ ಬಿಜೆಪಿ ನಾಯಕರು ಏನೂ ಕೆಲಸ ಮಾಡಿಲ್ಲ ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿಎಸ್‌ವೈ ಸೇರಿದಂತೆ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡು ಹೋಗಿದ್ದಾರೆ. ಆದುದರಿಂದ ಅವರು ಹತಾಶೆಗೊಂಡು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.
ದ್ವೇಷದ ರಾಜಕೀಯವನ್ನು ನಾವು ಯಾವುದೇ ಕಾರಣಕ್ಕೂ ಮಾಡುವುದಿಲ್ಲ. ಎಸಿಬಿಗೆ ವ್ಯಕ್ತಿಯೊಬ್ಬರು ನೀಡಿದ ದೂರನ್ನು ಆಧರಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅದಕ್ಕೂ ಸರಕಾರಕ್ಕೂ ಸಂಬಂಧ ಕಲ್ಪಿಸುವುದು ಸರಿಯಲ್ಲ. ಕಾನೂನಿನ ಅನ್ವಯ ಎಸಿಬಿ ಕ್ರಮ ಕೈಗೊಂಡಿದ್ದು ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಗೃಹ ಖಾತೆ ಶೀಘ್ರ ನಿರ್ಧಾ
‘ಸಚಿವ ಸಂಪುಟ ವಿಸ್ತರಣೆ ಸಂಬಂಧ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಕೆಲ ದಿನಗಳಲ್ಲೆ ಸಂಪುಟ ವಿಸ್ತರಣೆ ಆಗಲಿದೆ. ಗೃಹ ಖಾತೆ ಯಾರಿಗೆ ನೀಡಬೇಕೆಂದು ಇನ್ನೂ ನಿರ್ಧರಿಸಿಲ್ಲ. ಈ ಬಗ್ಗೆಯೂ ಶೀಘ್ರದಲ್ಲೆ ತೀರ್ಮಾನ ಮಾಡಲಾಗುವುದು’
-ಸಿದ್ದರಾಮಯ್ಯ ಮುಖ್ಯಮಂತ್ರಿ







