ಆ.30ರೊಳಗೆ ಬೂತ್ ಸಮಿತಿಗಳ ರಚನೆ: ಡಾ.ಜಿ.ಪರಮೇಶ್ವರ್

ಬೆಂಗಳೂರು, ಆ.19: ಬೂತ್ ಸಮಿತಿ, ಪಂಚಾಯತ್ ಸಮಿತಿ ಹಾಗೂ ವಾರ್ಡ್ ಸಮಿತಿಗಳನ್ನು ಆ.30ರೊಳಗೆ ಕಡ್ಡಾಯವಾಗಿ ರಚಿಸಿ, ಪೂರ್ಣ ಮಾಹಿತಿಯನ್ನು ಕೆಪಿಸಿಸಿಗೆ ತಲುಪಿಸುವಂತೆ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ.
ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ, ಪಕ್ಷದ ಸಂಘಟನೆ ದೃಷ್ಟಿಯಿಂದ ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ಅವರು ನೀಡಿದರು.
ಚುನಾವಣಾ ವರ್ಷವಾಗಿರುವುದರಿಂದ ಪದಾಧಿಕಾರಿಗಳು ತಮಗೆ ನೀಡಿರುವ ಉಸ್ತುವಾರಿ ಜಿಲ್ಲೆ, ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಮಯವನ್ನು ಸಂಘಟನೆಗಳಿಗೆ ಮೀಸಲಿಡಬೇಕು. ಅಲ್ಲದೆ, ಬೂತ್ ಮಟ್ಟದ ಏಜೆಂಟರನ್ನು ತುರ್ತಾಗಿ ನೇಮಕ ಮಾಡಬೇಕು ಎಂದು ಪರಮೇಶ್ವರ್ ತಿಳಿಸಿದರು.
ರಾಜ್ಯದ ಸುಮಾರು 66 ಸಾವಿರ ಬಿಎಲ್‌ಎ(ಬೂತ್‌ಮಟ್ಟದ ಏಜೆಂಟ್)ಗಳ ಸಭೆಯನ್ನು ಸೆಪ್ಟಂಬರ್ ತಿಂಗಳ ಮಧ್ಯಭಾಗದಲ್ಲಿ ಆಯೋಜಿಸಲಾಗುತ್ತಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಆ ಸಭೆಯಲ್ಲಿ ಏಜೆಂಟರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
ಪ್ರತಿಯೊಬ್ಬ ಪದಾಧಿಕಾರಿಯು ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು, 2018ರ ವಿಧಾನಸಭಾ ಚುನಾವಣೆಗೆ ತಯಾರಿಯಾಗಿ 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದ ಜನತೆಗೆ ಪ್ರಣಾಳಿಕೆಯಲ್ಲಿ ನೀಡಿದ್ಧ ಭರವಸೆಗಳನ್ನು, ರಾಜ್ಯ ಸರಕಾರ ಈಡೇರಿಸಿರುವುದನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಕೊಡಬೇಕು ಎಂದು ಪರಮೇಶ್ವರ್ ಹೇಳಿದರು.
ಅಲ್ಲದೆ, ಕೇಂದ್ರ ಬಿಜೆಪಿ ಸರಕಾರದ ವೈಫಲ್ಯಗಳ ಬಗ್ಗೆ ಜನತೆ ವಿವರಿಸುವಲ್ಲಿ ಕೆಪಿಸಿಸಿ ಪದಾಧಿಕಾರಿಗಳು ಆಯಾ ಬ್ಲಾಕ್ ಅಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರ ಸಹಯೋಗದಲ್ಲಿ ತಮ್ಮ ಪ್ರಭಾವ ಮತ್ತು ಕಾರ್ಯತಂತ್ರವನ್ನು ಬಳಸಿಕೊಂಡು ಕಾರ್ಯೋನ್ಮುಖ ರಾಗುವಂತೆ ಅವರು ಸೂಚಿಸಿದರು.
ಪದಾಧಿಕಾರಿಗಳು ತಮ್ಮ ಉಸ್ತುವಾರಿ ಜಿಲ್ಲೆ ಹಾಗೂ ವಿಧಾನಸಭೆ ಕ್ಷೇತ್ರಗಳಲ್ಲಿ ತಿಂಗಳಲ್ಲಿ ಒಂದು ವಾರದ ಮಟ್ಟಿಗೆ ವಾಸ್ತವ್ಯ ಹೂಡಿ ಕ್ಷೇತ್ರದ ಸ್ಥಿತಿಗತಿಗಳು ಮತ್ತು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಹಕರಿಸಿ ಸಂಘಟನೆ ಬಲಪಡಿಸಬೇಕು ಹಾಗೂ ಯಾವ ಯಾವ ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಅಂತಹ ಬ್ಲಾಕ್ ಅಧ್ಯಕ್ಷರನ್ನು ತಕ್ಷಣ ಬದಲಾವಣೆ ಮಾಡಲು ವರದಿ ನೀಡುವಂತೆ ಪರಮೇಶ್ವರ್ ಸೂಚನೆ ನೀಡಿದರು.
ಈ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್.ಆರ್.ಪಾಟೀಲ್, ದಿನೇಶ್‌ಗುಂಡೂರಾವ್, ಉಪಾಧ್ಯಕ್ಷರಾದ ಪ್ರೊ.ಬಿ.ಕೆ.ಚಂದ್ರಶೇಖರ್, ರಾಣಿ ಸತೀಶ್, ಆರ್.ಕೃಷ್ಣಪ್ಪ, ಡಾ.ಎಲ್.ಹನುಮಂತಯ್ಯ, ಪ್ರಧಾನ ಕಾರ್ಯದರ್ಶಿಗಳಾದ ವಿ.ವೈ.ಘೋರ್ಪಡೆ, ಜಿ.ಸಿ.ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ಸೇರಿದಂತೆ ಎಲ್ಲ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದ ಸಚಿವರಿಗೆ ಎಐಸಿಸಿ ಸೂಚನೆ
ಎಐಸಿಸಿ ನಿರ್ದೇಶನದಂತೆ ರಾಜ್ಯ ಸರಕಾರದ ಎಲ್ಲ ಸಚಿವರು ತಮ್ಮ ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಆಗಿರುವ ಅಭಿವೃದ್ಧಿ ಮತ್ತು ಪ್ರಗತಿಯ ಜೊತೆಗೆ ಕೇಂದ್ರ ಬಿಜೆಪಿ ಸರಕಾರದ ವೈಫಲ್ಯಗಳು ಹಾಗೂ ವಿರೋಧ ಪಕ್ಷದ ಮುಖಂಡರ ಟೀಕೆ ಟಿಪ್ಪಣಿಗಳ ಬಗ್ಗೆ ತಿಂಗಳಲ್ಲಿ ಎರಡು ದಿನ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ, ರಾಜ್ಯದ ಜನತೆಗೆ ವಾಸ್ತವಾಂಶಗಳನ್ನು ತಿಳಿಸಬೇಕು.
-ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ







