ಬಿಎಸ್‌ವೈ ವಿರುದ್ಧ ಹೇಳಿಕೆಗೆ ಒತ್ತಡ ಆರೋಪ: ರಾಜ್ಯಪಾಲರಿಗೆ ಕೆಎಎಸ್ ಅಧಿಕಾರಿ ದೂರು
ಯಡಿಯೂರಪ್ಪ ವಿರುದ್ಧದ ಡಿ-ನೋಟಿಫೈ ಪ್ರಕರಣ

ಬೆಂಗಳೂರು, ಆ. 19: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿವರಾಮಕಾರಂತ ಬಡಾವಣೆ ಡಿ-ನೋಟಿಫೈ ಮಾಡಿದ್ದಾರೆಂದು ಹೇಳುವಂತೆ ಎಸಿಬಿ ಅಧಿಕಾರಿಗಳು ತನ್ನ ಮೇಲೆ ಒತ್ತಡ ಹೇರುತ್ತಿದ್ದಾರೆಂದು ಗಣಿ ಇಲಾಖೆ ತನಿಖಾ ವಿಭಾಗದ ಉಪ ಕಾರ್ಯದರ್ಶಿ ಎಚ್.ಬಸವರಾಜೇಂದ್ರ, ರಾಜ್ಯಪಾಲ, ಸರಕಾರದ ಮುಖ್ಯಕಾರ್ಯದರ್ಶಿಗೆ ದೂರು ನೀಡಿದ್ದಾರೆ.
2010ರ ಜುಲೈ 12ರಿಂದ 2011ರ ಸಪ್ಟೆಂಬರ್ 11ರ ವರೆಗೆಮ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾನೂನು ಅನ್ವಯ ತಾನು ತನ್ನ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಬಸವರಾಜೇಂದ್ರ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಎಸಿಬಿ ಡಿವೈಎಸ್ಪಿ ಬಾಲರಾಜ್ ಅವರು 2017ರ ಆಗಸ್ಟ್ 6 ರಿಂದ 10ರ ಮಧ್ಯೆ ನನಗೆ ಹಲವು ಬಾರಿ ಕರೆ ಮಾಡಿ ಕಚೇರಿಗೆ ಖುದ್ದು ಹಾಜರಾಗುವಂತೆ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ತಾನು ಆ.10ರಂದು ಎಸಿಬಿ ಕಚೇರಿಗೆ ಹಾಜರಾಗಿದ್ದೆ. ಈ ವೇಳೆ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುವಂತೆ ಎಸಿಬಿ ಅಧಿಕಾರಿಗಳು ತನಗೆ ಒತ್ತಡ ಹೇರಿದರು.
ಆದರೆ, ತಾನು ಅವರ ಒತ್ತಡಕ್ಕೆ ಮಣಿಯಲಿಲ್ಲ. ಹೀಗಾಗಿ ಆ.17ರಂದು ಎಸಿಬಿ ಅಧಿಕಾರಿಗಳು ತನಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಅಲ್ಲದೆ, ಪ್ರಕರಣದಲ್ಲಿ ತನ್ನನ್ನು ಎರಡನೆ ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಶಿವರಾಮ ಕಾರಂತ ಬಡಾವಣೆ ಡಿ-ನೋಟಿಫೈ ಪ್ರಕರಣದಲ್ಲಿ ತನಗೆ ಯಾವುದೇ ಸಂಬಂಧವಿಲ್ಲದಿದ್ದರೂ, ಎಸಿಬಿ ಅಧಿಕಾರಿಗಳು ತನ್ನನ್ನು ಪ್ರಕರಣದಲ್ಲಿ ಸಿಲುಕಿಸಿ ಬಲಿಪಶು ಮಾಡಿದ್ದಾರೆ. ಹೀಗಾಗಿ ನನಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿನಲ್ಲಿ ಬಸವರಾಜೇಂದ್ರ ತಿಳಿಸಿದ್ದಾರೆ.







