ಗಂಗೊಳ್ಳಿ: ಮನೆ ಮೇಲೆ ಮರ ಬಿದ್ದು ಸಂಪೂರ್ಣ ಹಾನಿ
ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ

ಉಡುಪಿ, ಆ.19: ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ಗಾಳಿಯೊಂದಿಗೆ ಧಾರಾಕಾರ ಮಳೆ ಸುರಿಯುತಿದ್ದು, ಮಳೆಗಾಲದ ನಿಜವಾದ ದರ್ಶನವಾಗುತ್ತಿದೆ. ಇದರಿಂದ ಕೆಲವು ಕಡೆಗಳಲ್ಲಿ ಹಾನಿಯೂ ಆದ ಬಗ್ಗೆ ವರದಿಗಳು ಬಂದಿವೆ.
ಗಂಗೊಳ್ಳಿಯಲ್ಲಿ ನಿನ್ನೆ ರಾತ್ರಿ ಮನೆಯ ಮೇಳೆ ಭಾರೀ ಗಾತ್ರದ ಮರವೊಂದು ಬಿದ್ದಿದ್ದು, ಬಾರೀ ಪ್ರಮಾಣದ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ಗಂಗೊಳ್ಳಿಯ ಮ್ಯಾಂಗನೀಸ್ ರೋಡ್‌ನಲ್ಲಿ ಉದಯ ನಟರಾಜ್ ಎಂಬವರ ಮನೆಯ ಮೇಲೆ ರಾತ್ರಿ 11:30ರ ಸುಮಾರಿಗೆ ಭಾರೀ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು, ಇಡೀ ಮನೆ ಹಾನಿಗೊಂಡಿದೆ.
ಆದರೆ ಮರ, ಮನೆಯ ಮೇಲೆ ಉರುಳುವ ಮುನ್ನ ಕೇಳಿಸಿದ ದೊಡ್ಡ ಶಬ್ದಕ್ಕೆ ಹೆದರಿ ಉದಯ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ತಕ್ಷಣ ಹೊರಬಂದ ಕಾರಣ ಯಾರಿಗೂ ಯಾವುದೇ ಗಾಯವಾಗಿಲ್ಲ. ಇವರೆಲ್ಲರೂ ಮನೆಯಿಂದ ಹೊರಬರುತಿದ್ದಂತೆ ಮರ ಹಂಚಿನಮನೆಯ ಉರುಳಿ ಬಿತ್ತೆಂದು ತಿಳಿದುಬಂದಿದೆ. ಇದರಿಂದ ಮನೆಯ ಛಾವಣಿ ಸಂಪೂರ್ಣವಾಗಿ ಹಾನಿಗೊಂಡಿದೆ.
ಇದರಿಂದ ಸುಮಾರು ನಾಲ್ಕು ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ ಎಂದು ಕುಂದಾಪುರ ತಾಲೂಕು ಕಚೇರಿಯಿಂದ ತಿಳಿದುಬಂದಿದೆ.
ಬೈಂದೂರು: ಬೈಂದೂರು-ಶಿರೂರು ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆ ಹಾಗೂ ಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡ ಬಗ್ಗೆ ವರದಿಗಳು ಬಂದಿವೆ. ಅಲ್ಲಲ್ಲಿ ಅನೇಕ ಮರಗಳು ಹಾಗೂ ವಿದ್ಯುತ್ ಕಂಬ ಉರುಳಿ ಬಿದ್ದಿದ್ದು, ವಿದ್ಯುತ್ ಸರಬರಾಜು ವ್ಯತ್ಯಯಗೊಂಡಿತು. ಅನೇಕ ತಗ್ಗುಪ್ರದೇಶಗಳು ನೀರಿನಿಂದ ಆವೃತ್ತಗೊಂಡಿದ್ದವು. ಚತುಷ್ಪಥ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯಲ್ಲೂ ನೀರು ನಿಂತಿದ್ದು, ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿದ್ದವು.
ಬೈಂದೂರು-ಸೋಮೇಶ್ವರ ರಸ್ತೆಯಲ್ಲಿ ಮರಗಳು, ವಿದ್ಯುತ್ ಕಂಬ ರಸ್ತೆಗೆ ಉರುಳಿ ಬಿದ್ದಿದ್ದು, ಇದರಿಂದ ಈ ಮಾರ್ಗದಲ್ಲಿ ಬೆಳಗಿನಿಂದ ಯಾವುದೇ ಬಸ್‌ಗಳು ಸಂಚರಿಸಲಿಲ್ಲ. ಇದರಿಂದ ಶಾಲಾ ವಿದ್ಯಾರ್ಥಿಗಳು ತೊಂದರೆ ಪಡುವಂತಾಯಿತು.
ಇನ್ನು ಶಿರೂರಿನಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ, ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಂತು ಜನರು ತೊಂದರೆಯನ್ನು ಎದುರಿಸಿದರು.
ಜಿಲ್ಲೆಯ ಉಳಿದ ಭಾಗಗಳಲ್ಲೂ ನಿನ್ನೆ ಸಂಜೆ ಹಾಗೂ ರಾತ್ರಿ ಭಾರೀ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಸರಾಸರಿ 59.9ಮಿ.ಮೀ. ಮಳೆಯಾಗಿದೆ. ಕಾರ್ಕಳದಲ್ಲಿ ಅತ್ಯಧಿಕ 70.5ಮಿ.ಮೀ., ಕುಂದಾಪುರದಲ್ಲಿ 57ಮಿ.ಮೀ.. ಹಾಗೂ ಉಡುಪಿಯಲ್ಲಿ 52.2ಮಿ.ಮೀ.. ಮಳೆ ಸುರಿದ ಬಗ್ಗೆ ವರದಿಯಾಗಿದೆ. ಕಳೆದೊಂದು ತಿಂಗಳಿನಲ್ಲಿ ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆ ಇದಾಗಿದೆ.







