ಮೇಟಿ ಸಿಡಿ ಪ್ರಕರಣದ ಸಂತ್ರಸ್ತೆಗೆ ಬೆದರಿಕೆ: ಠಾಣೆ ಮೆಟ್ಟಿಲೇರಿದ ಸಂತ್ರಸ್ತ ಮಹಿಳೆ

ಬಾಗಲಕೋಟೆ, ಆ.19: ಮಾಜಿ ಸಚಿವ ಎಚ್.ವೈ.ಮೇಟಿ ಸಿಡಿ ಪ್ರಕರಣದ ಸಂತ್ರಸ್ತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿದ್ದಾರೆ. ಈ ವೇಳೆ ತಮಗೆ ರಕ್ಷಣೆ ನೀಡುವಂತೆ ಲಿಖಿತ ದೂರು ನೀಡಿದ್ದಾರೆ.
ಶನಿವಾರ ಎಸ್‌ಪಿ ಕಚೇರಿಗೆ ಆಗಮಿಸಿ ಸಿ.ಬಿ.ರಿಷ್ಯಂತ್ ಅವರನ್ನ ಭೇಟಿ ಮಾಡಿದ ಸಂತ್ರಸ್ತೆ ಲಿಖಿತ ದೂರು ನೀಡಿದರು. ದೂರಿನಲ್ಲಿ ತಮ್ಮ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಮೇಟಿ ಅವರ ಬೆಂಬಲಿಗರು ಕಳೆದ 2016ರ ಡಿಸೆಂಬರ್ 11ರಂದು ತನ್ನನ್ನು ಅಪಹರಿಸಿದ್ದರು. ಸಿಡಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮೇಲಿಂದ ಮೇಲೆ ಜೀವ ಬೆದರಿಕೆ ಹಾಕುತ್ತಿದ್ದು, ತಮಗೆ ರಕ್ಷಣೆ ನೀಡುವಂತೆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವ ಮೇಟಿ ಅವರ ಇಬ್ಬರು ಬೆಂಬಲಿಗರಿಂದ ತಮಗೆ ಜೀವ ಬೆದರಿಕೆ ಇರುವುದಾಗಿ ಮಾಧ್ಯಮಗಳ ಮುಂದೆ ತಿಳಿಸಿದ ಸಂತ್ರಸ್ತೆ ತನಿಖೆ ಸಮಯದಲ್ಲಿ ಅವರ ಹೆಸರು ಬಹಿರಂಗಗೊಳಿಸುವುದಾಗಿ ಹೇಳಿದರು.
ಇನ್ನು ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು, ಸಂತ್ರಸ್ತೆ ದೂರಿನಲ್ಲಿ ಏನು ಬರೆದುಕೊಡುತ್ತಾರೋ ಅದರ ಕುರಿತು ಕ್ರಮ ಕೈಗೊಳ್ಳಲಾಗುವುದು. ಅವರು ತಮಗೆ ಮಾಜಿ ಸಚಿವ ಮೇಟಿ ಅವರ ಬೆಂಬಲಿಗರಿಂದ ಜೀವಬೆದರಿಕೆ ಇದೆ ಎಂದು ತಿಳಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.







