ಸಾಧನೆ ಮಾಡಲು ಸಾಹಿತ್ಯ ಕ್ಷೇತ್ರ ಆಯ್ಕೆ ಮಾಡಿಕೊಂಡೆ: ಡಾ.ಎಚ್.ಗಿರಿಜಮ್ಮ
ಮನೆಯಂಗಳದಲ್ಲಿ ಮಾತುಕತೆ
ಬೆಂಗಳೂರು, ಆ.19: ನಮ್ಮ ಮನೆಯಲ್ಲಿ ಕಡು ಬಡತನ. ನಾನು ನೋಡಲು ಬಹಳ ಕಪ್ಪಗಿದ್ದೆ. ಹಾಗಾಗಿ, ಕುಟುಂಬದಲ್ಲಿ ಎಲ್ಲರೂ ನನ್ನ ಬಗ್ಗೆ ಏನಾದರೂ ಮಾತನಾಡಿಕೊಂಡರೆ ಬೇಸರವಾಗುತ್ತಿತ್ತು. ಸೌಂದರ್ಯವಂತೂ ಇಲ್ಲ. ಏನಾದರೂ ಸಾಧನೆ ಮಾಡಿದರೆ ಎಲ್ಲರೂ ನನ್ನ ಬಗ್ಗೆ ಒಳ್ಳೆಯ ಮಾತನಾಡಬಹುದು ಎಂದುಕೊಂಡು ಅಂದಿನಿಂದ ಸಾಹಿತ್ಯದ ಕಡೆಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡೆ.
ಹೀಗೆ ವೈದ್ಯೆ ಮತ್ತು ಸಾಹಿತಿ ಡಾ.ಎಚ್.ಗಿರಿಜಮ್ಮ ತಮ್ಮ ಸಾಧನೆಯ ಹಾದಿ ಪರಿಚಯಿಸಿಕೊಂಡರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ತಮ್ಮ ಅನುಭವಗಳನ್ನು ತೆರೆದಿಟ್ಟರು.
ವೈದ್ಯೆ ಅಮ್ಮನ ಆಸೆ: ನಮ್ಮ ತಾಯಿಯ ಅಭಿಲಾಷೆಯಂತೆ ವೈದ್ಯಯಾದರೂ, ನನ್ನ ವೃತ್ತಿ ಜೀವನದ ಯಶಸ್ಸಿನಲ್ಲಿ ಆಕೆಗೆ ಸಮಾಧಾನವಿರಲಿಲ್ಲ. ಬಡತನದಲ್ಲಿಯೇ ಬದುಕಿದ ನನ್ನಮ್ಮನಿಗೆ ಮಗಳು ಚೆನ್ನಾಗಿ ದುಡಿದು ಹಣವಂತಳಾಗಬೇಕೆಂಬ ಆಸೆಯಿತ್ತು. ನನಗೆ ರೋಗಿಗಳೊಂದಿಗೆ ಹಣ ಕೇಳಲು ಮನಸೇ ಬರುವುದಿಲ್ಲ. ಹಾಗಾಗಿ, ಯಾರಾದರೂ ಅವರಾಗಿಯೇ ಕೊಟ್ಟರೆ ಮಾತ್ರ ಹಣ ತೆಗೆದುಕೊಳ್ಳುವುದರಿಂದ ನನ್ನಮ್ಮನ ಇಷ್ಟದಂತೆ ಬದುಕಲು ನನಗೆ ಸಾಧ್ಯವಾಗಲಿಲ್ಲ ಎಂದು ನೆನಪಿಸಿಕೊಂಡರು.
ಕೀಳರಿಮೆ ಇತ್ತು: ನನ್ನ ಬಗ್ಗೆ ಕುಟುಂಬದಲ್ಲಿ ಕೀಳರಿಮೆ ಇತ್ತು. ಆದುದರಿಂದ ನಾನು ಏನಾದರೂ ಸಾಧನೆ ಮಾಡಬೇಕು ಎಂಬ ಹಠದಿಂದ ವೈದ್ಯಕೀಯ ರಂಗದ ಜೊತೆಗೆ, ಸಾಹಿತ್ಯದಲ್ಲೂ ತೊಡಗಿಸಿಕೊಂಡೆ. ಇಂದಿಗೂ ರಾತ್ರಿ ಒಂದು ಕಾದಂಬರಿಯನ್ನಾದರೂ ಓದದೆ ನಾನು ಮಲಗುವುದಿಲ್ಲ. ಸಾಹಿತ್ಯ ನನ್ನ ಎಲ್ಲ ಬೇಸರ, ಆಲಸ್ಯ, ಒಂಟಿತನಕ್ಕೆ ಮದ್ದು ಎಂದೇ ಭಾವಿಸಿದ್ದೇನೆ ಎಂದು ಹೇಳಿದರು.
ಚಿಕ್ಕಂದಿನಿಂದಲೂ ಡೈರಿ ಬರೆಯುವ ಅಭ್ಯಾಸ ರೂಢಿಸಿಕೊಂಡಿರುವುದರಿಂದ ಬರವಣಿಗೆಯೆಂಬುದು ನನ್ನೆಲ್ಲ ಆಂತರ್ಯದ ತುಮುಲಗಳಿಗೆ ಏಕೈಕ ಪರಿಹಾರ ಎಂಬ ಅರಿವು ಆಗಿದ್ದೇ ತಡ ಸಮಯ ಸಿಕ್ಕಾಗಲೆಲ್ಲ ಬರೆಯಲಾರಂಭಿಸಿದೆ ಎಂದು ಸಾಹಿತ್ಯಜೀವನ ನೆನಪಿಸಿಕೊಂಡರು.
ಯುವ ಸಮುದಾಯ ಮೊಬೈಲ್ ಬಳಸಬೇಡಿ: ಇಂದಿನ ದಿನಗಳಲ್ಲಿ ಯುವ ಸಮುದಾಯ ಸಾಹಿತ್ಯದಿಂದ ದೂರವಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಪುಸ್ತಕಗಳು ಕೈನಲ್ಲಿರಬೇಕಾದ ಯುವ ಸಮುದಾಯದ ಕೈಯಲ್ಲಿ ಮೊಬೈಲ್ ಇದೆ. ಸಾಮಾಜಿಕ ಜಾಲತಾಣದಲ್ಲಿಯೇ ದಿನವನ್ನು ಕಳೆಯುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಮೊಬೈಲ್, ಕಂಪ್ಯೂಟರ್ ಬಳಕೆ ಹೆಚ್ಚಾದಂತೆ ನಮ್ಮಲ್ಲಿನ ಜ್ಞಾಪಕ ಶಕ್ತಿ ಹಾಗೂ ಸೃಜನಾತ್ಮಕ ಪ್ರಕ್ರಿಯೆಯನ್ನು ಕೊಲ್ಲುತ್ತದೆ. ಹೀಗಾಗಿ ಮೊಬೈಲ್‌ನಿಂದ ಆದಷ್ಟು ಅಂತರ ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು.







