ನಿರುದ್ಯೋಗಿ ಯುವಜನತೆ ಧನಾತ್ಮಕ ಚಿಂತನೆಯೊಂದಿಗೆ ಸವಾಲುಗಳನ್ನು ಎದುರಿಸಬೇಕು: ಶಕುಂತಳಾ ಶೆಟ್ಟಿ
ಪುತ್ತೂರಿನಲ್ಲಿ ಬೃಹತ್ ಉದ್ಯೋಗ ಮೇಳ

ಪುತ್ತೂರು, ಆ. 19: ನಿರುದ್ಯೋಗ ಸಮಸ್ಯೆಯು ದೇಶದ ಗಂಭೀರ ಸವಾಲಾಗಿದ್ದು, ಯುವಕ ಯುವತಿಯರು ಉದ್ಯೋಗ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಬದುಕಿನಲ್ಲಿ ನೆಮ್ಮದಿ ಕಾಣುವಂತಾಗಬೇಕು. ಧನಾತ್ಮಕ ಚಿಂತನೆಯೊಂದಿಗೆ ಸವಾಲುಗಳನ್ನು ಎದುರಿಸಬೇಕು ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ವಿದ್ಯಾಮಾತಾ ಪೌಂಡೇಶನ್, ಜಯಕರ್ನಾಟಕ ಸಂಘಟನೆ ಹಾಗೂ ಪುತ್ತೂರು ಶಾಸಕರ ನೇತೃತ್ವದಲ್ಲಿ ಶನಿವಾರ ಮಂಜಲ್ಪಡ್ಪು ಸುದಾನ ವಿದ್ಯಾ ಸಂಸ್ಥೆಯಲ್ಲಿ ನಡೆದ ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಷ್ಟದಿಂದ ತಮ್ಮ ಮಕ್ಕಳಿಗೆ ವಿದ್ಯೆ ನೀಡಿದ ಹೆತ್ತವರು ಮಕ್ಕಳಿಗೆ ಉದ್ಯೋಗ ಸಿಕ್ಕಿಲ್ಲ ಎಂದು ನೊಂದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಇದೆಲ್ಲದರ ನಡುವೆ ಖಾಸಗಿ ಸಂಸ್ಥೆಗಳು ಸಾವಿರಾರು ಮಂದಿಗೆ ಉದ್ಯೋಗಾವಕಾಶ ನೀಡುತ್ತಿದೆ. ಶಿಕ್ಷಣದ ಅರ್ಹತೆ ಹಾಗೂ ಪ್ರತಿಭೆಗೆ ಅನುಗುಣವಾಗಿ ಸಾಕಷ್ಟು ಉದ್ಯೋಗಗಳು ಇಲ್ಲಿ ಲಭ್ಯವಾಗಲಿದೆ ಎಂದ ಅವರು ಇದೊಂದು ಸಮಾಜಮುಖಿ ಕಾರ್ಯಕ್ರಮವಾಗಿದ್ದು, ಯಾವುದೇ ನೋಂದಣಿ ಶುಲ್ಕ ವಿಲ್ಲದೆ ಉದ್ಯೋಗಾಂಕ್ಷಿಗಳಿಗೆ ಊಟ ಉಪಹಾರ ನೀಡಿ ಉದ್ಯೋಗ ಮೇಳ ನಡೆಯುತ್ತಿರುವುದು ಜಿಲ್ಲೆಯಲ್ಲಿಯೇ ಪ್ರಥಮವಾಗಿದೆ. ನೇರನೇಮಕಾತಿ ಮೂಲಕ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಪಡೆದುಕೊಳ್ಳುವ ಇಂತಹದ್ದೊಂದು ಅವಕಾಶ ಲಭಿಸಿದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಅಗತ್ಯ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಯೋಧ ರಾಧಾಕೃಷ್ಣ ಗೌಡ ನೆಲ್ಲಿಕಟ್ಟೆ ಮಾತನಾಡಿ, ನಾಡಿನ ಪ್ರತಿಭೆಗಳು ಅವಕಾಶಗಳಿಂದ ವಂಚಿತಗೊಳ್ಳುವ ಮೂಲಕ ವಿದೇಶಗಳಿಗೆ ಪಲಾಯನಗೊಳ್ಳುತ್ತಿರುವ ಸಂದರ್ಭದಲ್ಲಿ ಉದ್ಯೋಗ ಮೇಳಗಳ ಆವಶ್ಯಕತೆ ಅತೀ ಅಗತ್ಯವಾಗಿದೆ. ಯುವಜನತೆ ವೃತ್ತಿಪರತೆ, ಜಾಣ್ಮೆ ಹಾಗೂ ಅವಕಾಶಗಳನ್ನು ಬಳಸಿಕೊಳ್ಳುವ ಸವಾಲುಗಳನ್ನು ಎದುರಿಸಲು ಕಲಿತರೆ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹಿಂಜರಿಕೆಯ ಮನೋಭಾವನೆ ಬದಿಗಿಟ್ಟು ಉತ್ಸಾಹ ಹಾಗೂ ಛಲದಿಂದ ಮುನ್ನುಗ್ಗಬೇಕು. ಯಶಸ್ಸು ಸಿಗುತ್ತದೆ. ಈ ನಿಟ್ಟಿನಲ್ಲಿ ಯುವಜನತೆ ಚಿಂತನೆ ನಡೆಸಬೇಕು ಎಂದರು.
ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎನ್.ಸುಧಾಕರ ಶೆಟ್ಟಿ, ಸುದಾನ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ವಿಜಯ ಹಾರ್ವಿನ್, ಜಯಕರ್ನಾಟಕ ಸಂಘಟನೆಯ ರಾಜ್ಯ ವಕ್ತಾರ ಪ್ರಕಾಶ್ ರೈ ದೇರ್ಲ, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಜಯಕರ್ನಾಟಕ ಪುತ್ತೂರು ಘಟಕದ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಕಾರ್ಯಾಧ್ಯಕ್ಷ ಪ್ರಸನ್ನ ಕುಮಾರ್ ರೈ, ಗೌರವಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಪುತ್ತೂರು ಎ.ಪಿ.ಎಂ.ಸಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಅಕ್ಷಯ್ ಗ್ರೂಫ್ ನ ಜಯಂತ ನಡುಬೈಲ್, ಮಂಗಳೂರು ಬ್ರೈಟ್ ವೇ ಇಂಡಿಯಾದ ಆಡಳಿತ ನಿರ್ದೇಶಕ ಡಾ.ಹರ್ಷಕುಮಾರ್ ರೈ ಮಾಡಾವು ಮತ್ತಿತರರು ಉಪಸ್ಥಿತರಿದ್ದರು.
ಪುಡಾ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ವಿದ್ಯಾಮಾತಾ ಪೌಂಡೇಶನ್ ಇದರ ಅಧ್ಯಕ್ಷ ಭಾಗ್ಯೇಶ್ ರೈ ಉದ್ಯೋಗ ಮೇಳದ ಬಗ್ಗೆ ಮಾಹಿತಿ ನೀಡಿದರು. ತಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಹಾಗೂ ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಉದ್ಯೋಗ ಮೇಳದಲ್ಲಿ 98 ವಿವಿಧ ಕಂಪೆನಿಗಳು ಭಾಗವಹಿಸಿದ್ದು, 8 ಸಾವಿರಕ್ಕೂ ಮಿಕ್ಕಿದ ಉದ್ಯೋಗಾಂಕ್ಷಿ ಯುವಕ ಯುವತಿಯರು ಭಾಗವಹಿಸಿದ್ದರು.







