ಅರೆಬೆತ್ತಲೆ ಮೂಲಕ ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ: 4ನೇ ದಿನವು ಮುಂದುವರೆದ ಅನಿರ್ಧಿಷ್ಟವಧಿ ಮುಷ್ಕರ

ಹಾಸನ, ಆ. 19: 7ನೆ ವೇತನ ಆಯೋಗ ಶೀಘ್ರ ಜಾರಿಗೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಹಾಸನ ವಿಭಾಗದಿಂದ ಮುಖ್ಯ ಅಂಚೆ ಕಛೇರಿ ಮುಂದೆ ನಡೆಸಲಾಗುತ್ತಿರುವ ಅನಿರ್ಧಿಷ್ಟವಧಿ ಮುಷ್ಕರವನ್ನು 4ನೇ ದಿನ ಕಪ್ಪು ಪಟ್ಟಿಯೊಂದಿಗೆ ಅರೆಬೆತ್ತಲೆ ಆಗುವ ಮೂಲಕ ಪ್ರತಿಭಟಿಸಿ ಆಕ್ರೋಶವ್ಯಕ್ತಪಡಿಸಿದರು.
ಗ್ರಾಮೀಣ ಅಂಚೆ ನೌಕರರು, ಕೇಂದ್ರ ಸರಕಾರ ಖಾಯಂ ಮಾಡುವುದಕ್ಕೆ ಹಾಗೂ 7ನೇ ವೇತನ ಆಯೋಗ ಜಾರಿ ಮಾಡಲು ನಮ್ಮ ಆಗ್ರಹವಾಗಿದೆ. ದೇಶದಲ್ಲಿರುವ ಸುಮಾರು 100 ಕೋಟಿ ಜನರಿಗೆ ಸೇವೆಯನ್ನು ಒದಗಿಸಿದ್ದರೂ ಸ್ವಾತಂತ್ರ್ಯ ಬಂದು 71 ವರ್ಷ ಕಳೆದರೂ ಗ್ರಾಮೀಣ ಅಂಚೆ ನೌಕರರನ್ನು ಕೇಂದ್ರ ಸರಕಾರ ಇದುವರೆಗೂ ಖಾಯಂ ಮಾಡಿರುವುದಿಲ್ಲ. ಅಂಚೆ ಇಲಾಖೆಯಲ್ಲಿ ಇಲಾಖಾ ಅಧಿಕಾರಿ ವರ್ಗದವರು ಎರಡು ಇಲಾಖೆಯನ್ನು ಸೃಷ್ಠಿಸಿ ಗ್ರಾಮೀಣ ಅಂಚೆ ನೌಕರರನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವುದಾಗಿ ದೂರಿದರು. ಇಲಾಖಾ ನೌಕರರು ಮತ್ತ ಇಲಾಖೇತರ ನೌಕರರು, ಇಲಾಖೆ ನೌಕರರಿಗೆ ಕೇಂದ್ರ ಸರಕಾರ ಖಾಯಂ ನೌಕರರೆಂದು ಕರೆದರೇ, ಗ್ರಾಮೀಣ ಅಂಚೆ ನೌಕರರಿಗೆ ಹಂಗಾಮಿ ನೌಕರರೆಂದು ಹೆಸರಿಟ್ಟು ಗ್ರಾಮೀಣ ಅಂಚೆ ನೌಕರರ ಭವಿಷ್ಯವನ್ನೇ ಇಲಾಖಾ ಅಧಿಕಾರ ವರ್ಗಗಳು ಹಾಳು ಮಾಡುತ್ತಿದ್ದಾರೆ.
ಈ ಪ್ರಕರಣವನ್ನು ಕೇಂದ್ರ ಸರಕಾರ ಶೀಘ್ರದಲ್ಲಿಯೇ ಸಿಬಿಐ ತನಿಖೆಗೆವಹಿಸುವಂತೆ ಆಗ್ರಹಿಸಿದರು. ಗ್ರಾಮೀಣ ಅಂಚೆ ನೌಕರರಿಗೆ ಕೆಲಸವೇ ಇಲ್ಲವೆಂದು ಇಲಾಖಾ ಅಧಿಕಾರಿಯವರು ಕೇಂದ್ರ ಸರಕಾರಕ್ಕೆ ಮತ್ತು ಅಂಚೆ ಇಲಾಖೆಗೆ ಸುಳ್ಳು ವರದಿಯನ್ನು ನೀಡುತ್ತಿರುವುದಾಗಿ ಆರೋಪಿಸಿದರು.
ಗ್ರಾಮೀಣ ಅಂಚೆ ನೌಕರರು 8 ಗಂಟೆಗಿಂತಲೂ ಅಧಿಕ ಕೆಲಸ ಮಾಡಿದರೂ ಕೇವಲ 3 ರಿಂದ 5 ಗಂಟೆಗಳ ವೇತನವನ್ನು ಮಾತ್ರ ಕೊಡಲಾಗುತ್ತಿದೆ. ಗ್ರಾಮೀಣ ಅಂಚೆ ನೌಕರರು ದೇಶದಲ್ಲಿ ಸುಮಾರು 50 ಸಾವಿರ ಕೂಟಿಗೂ ಅಧಿಕವಾಗಿ ಆರ್‍ಪಿಎಲ್‍ಐ ಮಾಡಿಸಿ ಇಲಾಖೆಗೆ ಆಧಾಯ ತಂದು ಕೊಟ್ಟರೂ ಕೂಡ ಗ್ರಾಮೀಣ ಅಂಚೆ ನೌಕರರನ್ನು ಖಾಯಂ ಮಾಡಿರುವುದಿಲ್ಲ. ಕೂಡಲೇ ಕೆಲಸ ಖಾಯಂ ಮಾಡಿ 7ನೇ ವೇತನವನ್ನು ಶೀಘ್ರದಲ್ಲಿಯೇ ಜಾರಿಗೊಳಿಸುವವರೆಗೂ ದೇಶದಲ್ಲಿರುವ 2 ಲಕ್ಷದ 80 ಸಾವಿರ ಗ್ರಾಮೀಣ ಅಂಚೆ ನೌಕರರು ಅನಿಧಿಷ್ಠವಧಿ ಮುಷ್ಕರದಲ್ಲಿ ತೊಡಗಲಿದ್ದಾರೆ ಎಂದು ಎಚ್ಚರಿಸಿದರು. ಆಗಸ್ಟ್ 21ರ ಸೋಮವಾರದಿಂದ ಹಾಸನ ವಿಭಾಗ ಸೇರಿದಂತೆ ರಾಜ್ಯಾಧ್ಯಂತ ಎಲಾ ಗ್ರಾಮೀಣ ಅಂಚೆ ನೌಕರರು ಬೆಂಗಳೂರಿನ ಸಿಪಿಎಂಜಿ ಕಛೇರಿ ಮುಂದೆ ಧರಣಿ ನಡೆಸಿ, ಕಪ್ಪು ಭಾವುಟ ಪ್ರದರ್ಶಿಸಿ ಅರೆಬೆತ್ತಲೆ ಮೆರವಣಿಗೆ, ಹೆದ್ದಾರಿ ರಸ್ತೆ ತಡೆ ಚಳುವಳಿ, ರಾಜಭವನ ಮುತ್ತಿಗೆ ಸೇರಿದಂತೆ ವಿಭಿನ್ನ ರೀತಿಯಲ್ಲಿ ಚಳುವಳಿ ಮಾಡುವುದಾಗಿ ಎಚ್ಚರಿಸಿದ್ದಾರೆ.
ಮುಷ್ಕರದಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಹಾಸನ ವಿಭಾಗದ ಅಧ್ಯಕ್ಷ ಜಿ.ಬಿ. ಕಾಳಿಂಗೇಗೌಡ, ಕಾರ್ಯದರ್ಶಿ ಕೆ.ಜೆ. ಶಿವಾಜಿ, ಗೌರವ ಸಲಹಾಧ್ಯಕ್ಷ ಯೋಗನರಸಿಂಹ, ಗೌರವಧ್ಯಕ್ಷ ಟಿ.ಡಿ. ರಂಗಯ್ಯ, ಖಜಾಂಚಿ ಜಯಕುಮಾರ್, ಶ್ರೀನಿವಾಸ್, ದೇವರಾಜು ಇತರರು ಇದ್ದರು.







