ಪ್ರಕೃತಿ ಮಾತೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು: ನಿರ್ಮಲಾನಂದನಾಥ ಸ್ವಾಮೀಜಿ

ಚಿಕ್ಕಬಳ್ಳಾಪುರ, ಆ. 19: ಜೀವನಕ್ಕೆ ಆಸರೆ ಕಲ್ಪಿಸುವ ಪೋಷಕರನ್ನು ಹಾಗೂ ಜೀವಿಸಲು ಪೂರಕ ವಾತಾವರಣ ನಿರ್ಮಿಸಿರುವ ನಿಸರ್ಗವನ್ನು ಗೌರವಿಸುವ ಪರಿಪಾಠವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಒಕ್ಕಲಿಗರ ಸಂಘದಿಂದ ಹಮ್ಮಿಕೊಂಡಿದ್ದ 2ನೆ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಪೋಷಕರು ತಮ್ಮಲ್ಲಿನ ಶಕ್ತಿಯನ್ನು ಧಾರೆ ಎರೆದು ಮಕ್ಕಳ ಬದುಕಿಗೆ ಆಸರೆಯಾದರೆ, ಪ್ರಕೃತಿಯು ಕಣ್ಣಿಗೆ ಕಾಣದ ಭೌತಿಕ ಅಂಶಗಳೊಂದಿಗೆ ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಪೋಷಕರು ಹಾಗೂ ಪ್ರಕೃತಿ ಮಾತೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಯೊಬ್ಬರಲ್ಲೂ ತಮ್ಮದೇ ಆದ ಬುದ್ದಿವಂತಿಕೆಯಿದ್ದು, ಮನಸ್ಸಿನ ಚಂಚಲತೆಗೆ ಕಡಿವಾಣ ಹಾಕುವ ಜೊತೆಗೆ ಶ್ರದ್ದಾ ಭಕ್ತಿ ವ್ಯಾಸಂಗ ಮಾಡಿದಲ್ಲಿ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಸಾಧಿಸಬಹುದಾಗಿದೆ. ಅಲ್ಲದೆ ಕ್ಷಣಿಕವಾದ ಆಸೆಗಳಿಗೆ ಜೋತು ಬೀಳದೇ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಲು ಕ್ರೀಯಾಶೀಲರಾಗಿ ಕಾರ್ಯ ಪ್ರವೃತ್ತರಾಗಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು, ಸಾಧನೆಗೆ ನೆರವಾಗುವವರ ಬಗ್ಗೆ ಕೃತಜ್ಞಾತಾ ಮನೋಭಾವ ಹೊಂದಿರುವವರಿಗೆ ಮಾತ್ರ ಸಮಾಜದಲ್ಲಿ ಉತ್ತಮ ಸ್ಥಾನಮಾನದೊಂದಿಗೆ ಗೌರವ ಲಭಿಸುವುದು ಎಂದು ಅಭಿಪ್ರಾಯಪಟ್ಟರು.
ಅಲ್ಲದೆ ಸಂಘಗಳು ವಿಶಾಲ ದೃಷ್ಟಿಕೋನದೊಂದಿಗೆ ಸಮುದಾಯ ಏಳಿಗೆಗೆ ಶ್ರಮಿಸುವ ಜೊತೆಗೆ ಸಮುದಾಯದಲ್ಲಿನ ಲೋಪ ದೋಷಗಳನ್ನು ಸರಿಪಡಿಸಲು ಮುಂದಾದಲ್ಲಿ ಮಾತ್ರ ಸಮುದಾಯದ ಏಳಿಗೆಯೊಂದಿಗೆ ದೇಶದ ಅಭಿವೃದ್ಧಿಗೂ ಸಹಕಾರಿಯಾಗುವುದು ಎಂದ ಅವರು, ಹಣ ಗಳಿಸುವುದೊಂದೆ ಜೀವನದ ಗುರಿಯನ್ನಾಗಿಸಿಕೊಳ್ಳದೇ ಇತರರಿಗೆ ನೆರವಾಗುವ ಪ್ರವೃತ್ತಿಯನ್ನು ಬೆಳಸಿಕೊಳ್ಳಬೇಕೆಂದು ತಿಳಿಸಿದರು.
ಜಿಪಂ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ ಮಾತನಾಡಿ, ದೇಶದ ಪರಂಪರೆ, ಇತಿಹಾಸದೊಂದಿಗೆ ಪ್ರಸ್ತುತದ ಆಗುಹೋಗುಗಳ ಕುರಿತು ಪ್ರಜ್ಞೆಯನ್ನು ಹೊಂದಿದ್ದಲ್ಲಿ ಮಾತ್ರ ಉಜ್ವಲ ಭವಿಷ್ಯವನ್ನು ಕಂಡುಕೊಳ್ಳುವ ಜೊತೆಗೆ ದೇಶಕ್ಕೆ ತಮ್ಮದೇ ಕಾಣಿಕೆ ನೀಡಲು ಸಾಧ್ಯ ಎಂದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಾಧನೆ, ಯಶಸ್ಸು ಎಂಬುದು ನಿರಂತರ ಪರಿಶ್ರಮದಿಂದ ಮಾತ್ರ ಒಲಿಯುವುದು ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕಿದೆ. ಅಲ್ಲದೆ ಶಿಕ್ಷಣ ಹಾಗೂ ಆರೋಗ್ಯ ಹೆಚ್ಚಿನ ಮಹತ್ವ ನೀಡಬೇಕೆಂದೆ ಎಂದ ಅವರು, ಕಳೆದ ಹಲವು ದಶಕಗಳಿಂದ ಚಿಕ್ಕಬಳ್ಳಾಪುರ ಸೇರಿದಂತೆ ಸುತ್ತಲಿನ ಹಲವಾರು ಜಿಲ್ಲೆಗಳ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಶ್ರಮಿಸುತ್ತಿರುವ ಬಿಜಿಎಸ್ ವಿದ್ಯಾ ಸಂಸ್ಥೆಗಳ ಕಾರ್ಯವು ಅನನ್ಯವಾಗಿದೆ ಎಂದರು.
ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಆರ್. ನಾರಾಯಣಸ್ವಾಮಿ ಮಾತನಾಡಿ, ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಒದಗಿಸುವುದು ಪೋಷಕರ ಆದ್ಯ ಕರ್ತವ್ಯವಾಗಿದೆ. ಅಲ್ಲದೆ ಮಕ್ಕಳ ಜೀವನ ಹಸನುಗೊಳ್ಳಲು ವಿದ್ಯೆ ಪೂರಕ ಎಂಬುದನ್ನು ಅರಿವು ವಿದ್ಯಾಭ್ಯಾಸ ಮೊದಲ ಪ್ರಾಶಸ್ತ್ಯ ನೀಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಸ್‍ಸಿ ಮತ್ತು ಪಿಯುಸಿ ಹಲವು ವಿಭಾಗಗಳಲ್ಲಿ ಶೇ.85 ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಾಥ ಸ್ವಾಮೀಜಿ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎನ್. ರಮೇಶ್, ಡಾ.ಕೆ.ಪಿ. ಶ್ರೀನಿವಾಸ್ ಮೂರ್ತಿ, ನಾರಾಯಣಸ್ವಾಮಿ, ವೆಂಕಟರೆಡ್ಡಿ, ಪಿ. ನಾಗರಾಜ್, ಎಂ.ಪ್ರಕಾಶ್, ಎ.ವಿ. ಬೈರೇಗೌಡ ಸೇರಿದಂತೆ ಮತ್ತಿತರರು ಇದ್ದರು.







