ಧರ್ಮಸ್ಥಳದಲ್ಲಿ ನವಜೀವನ ಸಮಿತಿಯ ಶತದಿನೋತ್ಸವ
ಬೆಳ್ತಂಗಡಿ, ಆ. 19: ಮೂಲತಃ ಯಾರೂ ಕೆಟ್ಟವರಲ್ಲ. ಆದರೆ ಯಾರು ಮದ್ಯಪಾನದಂತಹ ದುಶ್ಚಟಕ್ಕೆ ಒಳಗಾಗುತ್ತಾರೋ ಅವರು ಮತಿಭ್ರಮಣೆಗೊಳಗಾಗಿ ಕೆಟ್ಟ ಕೆಲಸಗಳನ್ನು ಮಾಡುತ್ತಾರೆ. ದುಶ್ಚಟಗಳನ್ನು ಅಭ್ಯಾಸ ಮಾಡಿಕೊಂಡವರನ್ನು ಸಮಾಜ ನಿಕೃಷ್ಟವಾಗಿ ನೋಡುತ್ತದೆ. ದುಶ್ಚಟಗಳಿಂದ ಮುಕ್ತವಾದರೆ ಒಳ್ಳೆಯ ರೀತಿಯ ಜೀವನವನ್ನು ನಡೆಸಲು ಸಾಧ್ಯ. ಸಮಾಜದಲ್ಲಿ ಗೌರವದಿಂದ ಬಾಳಲು ಸಾಧ್ಯವಾಗುತ್ತದೆ. ಮದ್ಯಪಾನ ತ್ಯಜಿಸಿದವರು ಮತ್ತೆ ಯಾವುದೇ ರೀತಿಯ ದುಶ್ಚಟಗಳಿಗೆ ಒಳಗಾಗಬಾರದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವತಿಯಿಂದ ನಡೆದ ನವಜೀವನ ಸಮಿತಿಯ ನವ ಜೀವನೋತ್ಸವದ ಶತದಿನೋತ್ಸವ ಕಾರ್ಯಕ್ರದಲ್ಲಿ ಮಾತನಾಡಿದರು.
ಮನೆಯ ಕಿಟಕಿಯಲ್ಲಿ ಗಾಳಿ ಬೆಳಕಿನ ಜೊತೆ ಅನಗತ್ಯವಾದ ಧೂಳು ಕೂಡ ಒಳಬರುವ ಸಂದರ್ಭದಲ್ಲಿ ಗಾಳಿ ಬೆಳಕನ್ನು ಮಾತ್ರ ಸ್ವೀಕರಿಸಿ ಧೂಳನ್ನು ನಿರ್ಲಕ್ಷ್ಯಿಸುತ್ತೇವೆಯೋ ಅದೇ ರೀತಿ ನಮ್ಮ ದೇಹದ ಪಂಚೇಂದ್ರಿಯಗಳ ಮೂಲಕ ಒಳ್ಳೆಯ ವಿಚಾರಗಳನ್ನು ಮಾತ್ರ ಸ್ವೀಕರಿಸಿ ಕೆಟ್ಟ ವಿಚಾರಗಳನ್ನು ನಮ್ಮಿಂದ ದೂರವಿರಿಸಬೇಕು. ಮದ್ಯಪಾನ, ದುಶ್ಚಟ ಮುಂತಾದ ಕೆಟ್ಟ ವಿಚಾರಗಳ ಆಕರ್ಷಣೆಗೆ ಒಳಗಾಗದಂತೆ ಮನಸ್ಸನ್ನು ನಿಗ್ರಹಿಸಿಕೊಳ್ಳಬೇಕು ಎಂದರು.
ರಾಜ್ಯದ 13 ತಾಲೂಕುಗಳಾದ ತಿಪಟೂರು, ಯಲ್ಲಾಪುರ, ತೀಥಹಳ್ಳಿ, ಶಿಕಾರಿಪುರ, ಯಳಂದೂರು, ಹರಪ್ಪನಹಳ್ಳಿ, ಹುಣಸೂರು, ಪುತ್ತೂರು, ಮಳವಳ್ಳಿ, ದೇವದುರ್ಗ, ಕಾಸರಗೋಡು, ಚಿಕ್ಕೋಡಿ ಮತ್ತು ಧಾರವಾಡಗಳಿಂದ ಒಟ್ಟು 836 ಜನ ಪಾನಮುಕ್ತ ನವಜೀವನ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಘಟನೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿರ್ದೇಶಕರು ವಿವೇಕ್ ವಿ. ಪಾಸ್, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕರವರು ಮಾಡಿದ್ದು,ಶಿಬಿರಾಧಿಕಾರಿಗಳಾದ ಭಾಸ್ಕರ್ ಮತ್ತು ಗಣೇಶ್ ಆಚಾರ್ಯಕಾರ್ಯಕ್ರಮ ನಿರೂಪಿಸಿದರು.







