'ಕಲೆಯೊಂದಿಗೆ ಗುರುತಿಸಿಕೊಳ್ಳುವ ಹುಮ್ಮಸ್ಸಿನಿಂದ ಸಾಧನೆ'
ಬೆಳ್ತಂಗಡಿ, ಆ. 19: ವಿದ್ಯಾರ್ಥಿಗಳು ಲಲಿತ ಕಲೆಗಳ ವಲಯದಲ್ಲಿ ಗುರುತಿಸಿಕೊಳ್ಳುವ ಹುಮ್ಮಸ್ಸು ಜೀವಂತವಾಗಿರಿಸಿಕೊಂಡು ಸಾಧನೆಯ ಹಾದಿ ಕ್ರಮಿಸಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ.ಕೆ.ಎಂ.ಲೋಕೇಶ್ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ ವಿ.ವಿ.ಮಟ್ಟದ ಅಂತರಕಾಲೇಜು ಲಲಿತಕಲಾ ಸ್ಪರ್ಧೆಗಳ ಕಾರ್ಯಕ್ರಮ ಸೃಷ್ಟಿ 2017ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಲೆಯು ಕೇವಲ ಹಲವರನ್ನು ರಂಜಿಸುವ ಉದ್ದೇಶವನ್ನಷ್ಟೇ ಈಡೇರಿಸುವುದಿಲ್ಲ. ಕಲೆಯು ವ್ಯಕ್ತಿಯನ್ನು ಉತ್ತುಂಗಕ್ಕೇರಿಸುತ್ತದೆ. ಜನಪ್ರಿಯಗೊಳಿಸುತ್ತದೆ. ಅಲ್ಲದೇ, ಕಲೆಯನ್ನೇ ವೃತ್ತಿಯನ್ನಾಗಿಸಿಕೊಂಡು ಭಿನ್ನವಾಗಿ ಗುರುತಿಸಿಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಆ ಮೂಲಕ ಕಲೆಗೆ ವೃತ್ತಿಪರ ಘನತೆ ದೊರಕುತ್ತದೆ ಎಂದು ಹೇಳಿದರು.
ಕಲೆಗಳ ಕುರಿತಾದ ಕುತೂಹಲ ಯಾವತ್ತೂ ಕಡಿಮೆಯಾಗಬಾರದು. ಅದು ನಿರಂತರವಾಗಿರಬೇಕು. ಮಾನ್ಯತೆ ಸಿಗುತ್ತಿಲ್ಲ ಎಂಬ ಕೊರಗಿನೊಂದಿಗಿದ್ದರೆ ಕಲೆಯ ಕೌಶಲ್ಯವನ್ನು ರೂಢಿಸಿಕೊಳ್ಳಲಾಗದು. ವಿದ್ಯಾರ್ಥಿಗಳು ಸ್ವಯಂಪ್ರೇರಣೆಯೊಂದಿಗೆ ಲಲಿತಕಲೆಗಳ ಬಗ್ಗೆ ಕುತೂಹಲವಿರಿಸಿಕೊಂಡು ಪ್ರತಿಭೆಯನ್ನು ರೂಪುಗೊಳಿಸಿಕೊಳ್ಳಲು ಶ್ರಮಿಸಬೇಕು ಎಂದರು.
ಅನೇಕ ಸಾಂಪ್ರದಾಯಿಕ ಕಲೆಗಳು ಯಾಂತ್ರಿಕತೆಯ ಭರಾಟೆಯಲ್ಲಿ ಹಿನ್ನೆಲೆಗೆ ಸರಿಯುತ್ತಿವೆ. ತಂತ್ರಕೌಶಲ್ಯವೇ ಕಲೆಗಳ ಜೀವಾಳ. ಯಾವುದೋ ಒಂದು ಸಾಧನವನ್ನಷ್ಟೇ ನೆಚ್ಚಿಕೊಂಡು ಕಲಾ ಪ್ರತಿಭೆಯನ್ನು ಸಾಬೀತುಪಡಿಸುವುದಕ್ಕಾಗುವುದಿಲ್ಲ. ಯಾಂತ್ರಿಕ ಸಾಧನ ಕಲಾಭಿವ್ಯಕ್ತಿಗೆ ಪೂರಕವಾಗುತ್ತದೆ. ಆದರೆ, ಅದೇ ಸಾಧನವನ್ನೇ ಕಲಾಪ್ರತಿಭೆ ಅವಲಂಬಿಸಬಾರದು ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರು ಕಾಲೇಜಿನ ವಿದ್ಯಾರ್ಥಿಗಳು ಲಲಿತಕಲೆಗಳ ಮೂಲಕ ಗುರುತಿಸಿಕೊಂಡು ರಾಷ್ಟ್ರ ಮತ್ತು ಜಾಗತಿಕ ಮಟ್ಟದಲ್ಲಿ ಮಿಂಚಿದ್ದಾರೆ ಎಂದು ಹೇಳಿದರು. ಚಿತ್ರಕಲಾವಿದರಾಗಿ ಖ್ಯಾತನಾಮರಾಗಿರುವ ವಿಲಾಸ್‌ನಾಯಕ್ ಅವರ ಪ್ರತಿಭಾ ವೈಶಿಷ್ಟ್ಯತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಸ್.ಮೋಹನನಾರಾಯಣ ಉಪಸ್ಥಿತರಿದ್ದರು. ಡಾ.ಬಿ.ಎಸ್.ಸಂಪತ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಅಂತರಕಾಲೇಜು ಲಲಿತಕಲಾ ಸ್ಪರ್ಧೆ ಸೃಷ್ಟಿ 2017ರ ಮುಖ್ಯಸ್ಥ ಲಕ್ಷ್ಮೀನಾರಾಯಣ ಕೆ.ಎಸ್. ಸ್ವಾಗತಿಸಿದರು. ಸಂಯೋಜಕರಾದ ನವೀನ್ ಕುಮಾರ್ ಜೈನ್ ವಂದಿಸಿದರು.
ನಂತರ ಆನ್ ದ ಸ್ಪಾಟ್ ಪೇಂಟಿಂಗ್, ಕೊಲಾರ್, ಪೋಸ್ಟರ್ ಮೇಕಿಂಗ್, ಕ್ಲೇ ಮಾಡೆಲಿಂಗ್, ಕಾರ್ಟೂನಿಂಗ್, ರಂಗೋಲಿ ಮತ್ತು ಸ್ಪಾಟ್ ಫೋಟೋಗ್ರಫಿ ವಿಭಾಗಗಳಲ್ಲಿ ವಿವಿಧ ಲಲಿತಕಲಾ ಸ್ಪರ್ಧೆಗಳು ನಡೆದವು. ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ 25 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.







