ಚಿಕ್ಕನಹಳ್ಳಿ: ಬಂಡೆ ಉದ್ಯಾನವನ ಲೋಕಾರ್ಪಣೆ

ಬೆಂಗಳೂರು, ಆ.20: ಸಿಲಿಕಾನ್ ಸಿಟಿಯ ಬೊಮ್ಮನಹಳ್ಳಿ ವಾರ್ಡಿನ ದೇವರ ಚಿಕ್ಕನಹಳ್ಳಿಯಲ್ಲಿ ವಿಶಿಷ್ಟವಾಗಿ ನಿರ್ಮಾಣಗೊಂಡಿರುವ ದೇಶದ ಮೊದಲ ಬಂಡೆ ಉದ್ಯಾನವನವನ್ನು ಕೇಂದ್ರ ಸಚಿವ ಅನಂತ್‌ಕುಮಾರ್, ಬಿಬಿಎಂಪಿ ಮೇಯರ್ ಪದ್ಮಾವತಿ ಸೇರಿದಂತೆ ಇನ್ನಿತರ ಗಣ್ಯರು ಲೋಕಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಅನಂತ್‌ಕುಮಾರ್, ಸಾರ್ವಜನಿಕರ ಬಗ್ಗೆ ಕಾಳಜಿ, ಅವರಿಗಾಗಿ ಕೆಲಸ ಮಾಡಬೇಕೆಂಬ ಹಪಾಹಪಿತನ ಜನಪ್ರತಿನಿಧಿಗಳಲ್ಲಿದ್ದರೆ ಕಲ್ಲೂ ಕೂಡ ಮಾತನಾಡಬಲ್ಲದು ಎಂಬ ಮಾತಿಗೆ ಈ ಬಂಡೆ ಉದ್ಯಾನವನ ಧ್ಯೋತಕವಾಗಿ ನಿಂತಿದೆ ಎಂದು ಅಭಿಪ್ರಾಯಪಟ್ಟರು.
ಈ ಒಂದೂವರೆ ಎಕರೆ ಜಾಗದಲ್ಲಿ ಕಸದ ರಾಶಿ ಹಾಕಿದ್ದು, ಗಬ್ಬು ವಾಸನೆ ಬರುತ್ತಿತ್ತು. ಸಾರ್ವಜನಿಕರು ಮೂಗಿಗೆ ಬಟ್ಟೆ ಕಟ್ಟಿಕೊಂಡು ಓಡಾಡುವ ಸ್ಥಿತಿ ಇತ್ತು. ಹೀಗಾಗಿ, ಇಲ್ಲಿ ವಿಶೇಷವಾಗಿ ಏನಾದರೂ ಮಾಡಬೇಕು ಎಂದಾಗ ಈ ಬಂಡೆ ಉದ್ಯಾನವನ ನೆನಪಿಗೆ ಬಂತು. ಅದರ ಭಾಗವಾಗಿ ನಾಲ್ಕು ತಿಂಗಳು ಕಾಲಾವಧಿಯಲ್ಲಿ ಅತ್ಯುತ್ತಮವಾದ ಉದ್ಯಾನವನ ನಿರ್ಮಾಣವಾಗಿದೆ ಎಂದು ಪಾಲಿಕೆ ಸದಸ್ಯ ಸಿ.ಆರ್.ಮೋಹನ್‌ರಾಜು ತಿಳಿಸಿದರು.
ಮಹಾಬಲಿಪುರದಿಂದ ಕಪ್ಪು ಕಲ್ಲುಗಳನ್ನು ತಂದು ನಿರ್ಮಾಣ ಮಾಡಲಾಗಿದೆ. ಆರಂಭದಲ್ಲಿ ಬಿಬಿಎಂಪಿ ಲೋಗೋ ಇರುವ ಬಂಡೆ ಎಲ್ಲರನ್ನೂ ಸ್ವಾಗತಿಸಲಿದೆ. ಬುದ್ಧನ ಪ್ರತಿಕೃತಿ, ಮಕ್ಕಳಿಗೆ ಮುದ ನೀಡುವ ಹಲವು ಪ್ರಾಣಿಗಳ ಪ್ರತಿಕೃತಿಗಳು ಇಲ್ಲಿವೆ. ಅಲ್ಲದೆ, ರೈತರು ವ್ಯವಸಾಯಕ್ಕೆ ಬಳಸುವ ಹಲವಾರು ಉಪಕರಣಗಳಿವೆ. ಜೊತೆಗೆ, ವಿಧಾನಸೌಧದಲ್ಲಿ ಅಳವಡಿಸಿರುವಂತಹ 12 ಅಡಿ ಎತ್ತರದ ಆರ್ನ ಮೆಂಟಲ್ ಫೆನ್ಸಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಶಾಸಕ ಸತೀಶ್ ರೆಡ್ಡಿ, ಮೇಯರ್ ಜಿ.ಪದ್ಮಾವತಿ ಉಪಸ್ಥಿತರಿದ್ದರು.







