ಚಾಕುವಿನಿಂದ ಇರಿದು ಸ್ನೇಹಿತರಿಂದಲೇ ಆಟೊ ಚಾಲಕನ ಹತ್ಯೆ

ಬೆಂಗಳೂರು, ಆ.20: ಆಟೊ ಚಾಲಕನನ್ನು ಸ್ನೇಹಿತರೇ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಲಾಸಿಪಾಳ್ಯದ ನಿವಾಸಿ, ವೃತ್ತಿಯಲ್ಲಿ ಆಟೊ ಚಾಲಕನಾಗಿದ್ದ ಅಝರುದ್ದೀನ್ (27) ಕೊಲೆಯಾದ ವ್ಯಕ್ತಿ. ಈ ಮೊದಲು ಶಿವಾಜಿನಗರದಲ್ಲಿ ವಾಸವಿದ್ದ.
ಶನಿವಾರ ಶಿವಾಜಿನಗರಕ್ಕೆ ಬಂದಿದ್ದ ಅಝರುದ್ದೀನ್, ತನ್ನ ಇಬ್ಬರು ಸ್ನೇಹಿತರೊಂದಿಗೆ ರಾತ್ರಿ 11 ಗಂಟೆ ಸುಮಾರಿಗೆ ಬಾಡಿಗೆ ಆಟೊದಲ್ಲಿ ಟ್ಯಾನರಿ ರಸ್ತೆಗೆ ತೆರಳುತ್ತಿದ್ದ. ನೇತಾಜಿ ರಸ್ತೆಯ ಜಿ.ಕೆ.ವೇಲು ಸ್ಟುಡಿಯೋ ಸಮೀಪ ಆಟೊ ಚಾಲಕ ಮೆಡಿಕಲ್ ಸ್ಟೋರ್ ಗೆ ಹೋಗಿ ಬರುವುದಾಗಿ ಆಟೊ ನಿಲ್ಲಿಸಿ ತೆರಳಿದ್ದ.
ಬಳಿಕ ಆತ ವಾಪಸಾದಾಗ ಆಟೊದಲ್ಲಿದ್ದ ಅಝರುದ್ದೀನ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತನ ಜೊತೆಯಲ್ಲಿದ್ದ ಇಬ್ಬರು ನಾಪತ್ತೆಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಝರುದ್ದೀನ್‌ನನ್ನು ಸ್ಥಳೀಯರ ನೆರವಿನೊಂದಿಗೆ ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
Next Story





