ಶಿವಮೊಗ್ಗ ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡುತ್ತಿರುವ ಕೆ.ಎಸ್.ಈಶ್ವರಪ್ಪ
ವಿಧಾನಸಭೆ ಚುನಾವಣೆಗೆ ವಿಭಿನ್ನ ಗೇಮ್ ಪ್ಲ್ಯಾನ್ !

ಶಿವಮೊಗ್ಗ, ಆ. 20: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಕೇವಲ ಐದಾರು ತಿಂಗಳು ಮಾತ್ರವಿದ್ದು, ಈಗಾಗಲೇ ಪ್ರಮುಖ ರಾಜಕೀಯ ಪಕ್ಷಗಳು ಜಿಲ್ಲೆಯಲ್ಲಿ ಚುನಾವಣೆ ಪೂರ್ವಭಾವಿ ತಯಾರಿಯಲ್ಲಿ ತಲ್ಲೀನವಾಗಿವೆ. ಮತ್ತೊಂದೆಡೆ ಸ್ಪರ್ಧಾಕಾಂಕ್ಷಿಗಳು ಮತದಾರರ ಮನವೊಲಿಕೆಯ ಚಟವಟಿಕೆ ಆರಂಭಿಸುವ ಮೂಲಕ ಪರೋಕ್ಷವಾಗಿ ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ.
ಶಿವಮೊಗ್ಗ ನಗರ ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿರುವ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪರವರು ಮತದಾರರ ಮನವೊಲಿಕೆಯ ಜೊತೆ ಜೊತೆಗೆ ಪಕ್ಷದ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸುವ ಕೆಲಸವನ್ನು ಭರ್ಜರಿಯಾಗಿ ನಡೆಸಲಾರಂಭಿಸಿದ್ದಾರೆ. ಇದಕ್ಕಾಗಿಯೇ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ಪ್ರಮುಖ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಮುಕ್ತ ಸಮಾಲೋಚನೆ ನಡೆಸುತ್ತಿದ್ದಾರೆ. ಅಲ್ಲದೆ, ಸ್ಥಳೀಯವಾಗಿ ಪಕ್ಷದ ಸಂಘಟನೆಯ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ.
ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಜೊತೆಗೆ ಕಾರ್ಯಕರ್ತರ ಮನೆಗಳಲ್ಲಿಯೇ ಉಪಹಾರ ಸೇವನೆ ಮಾಡುತ್ತಿದ್ದಾರೆ. ಈ ಮೂಲಕ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮುಂಬರುವ ವಿಧಾನಸಭೆ ಚುನಾವಣೆಯನ್ನು ಪರಿಣಾಮಕಾರಿಯಾಗಿ ಎದುರಿಸುವ ಹಾಗೂ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುವ ಪ್ಲ್ಯಾನ್ ಈ ಭೇಟಿಯ ಹಿಂದಿದೆ ಎಂದು ಕೆಎಸ್‍ಇ ಆಪ್ತ ಮೂಲಗಳು ಹೇಳುತ್ತವೆ.
ಇತ್ತೀಚೆಗೆ ಕೆ.ಎಸ್.ಈಶ್ವರಪ್ಪರವರು ಮಹಾನಗರ ಪಾಲಿಕೆ 5 ನೇ ವಾರ್ಡ್ ವ್ಯಾಪ್ತಿಯ ಗಾಡಿಕೊಪ್ಪದ ಬಿಜೆಪಿ ಮುಖಂಡ, ವೀರಶೈವ ಸಮಾಜದ ಮುಖಂಡ ಚೆನ್ನಬಸಪ್ಪರವರ ಮನೆಗೆ ಭೇಟಿ ನೀಡಿದ್ದರು. ಅವರ ಮನೆಯಲ್ಲಿಯೇ ಉಪಹಾರ ಸೇವಿಸಿ ಚೆನ್ನಬಸಪ್ಪ ಕುಟುಂಬ ಸದಸ್ಯರೊಂದಿಗೆ ಉಭಯ ಕುಶಲೋಪರಿ ನಡೆಸಿದ್ದಾರೆ. ನಂತರ ಮನೆಯ ಆವರಣದಲ್ಲಿಯೇ ಸ್ಥಳೀಯ ಕಾರ್ಯಕರ್ತರ ಸಭೆ ನಡೆಸಿ ಸಲಹೆ-ಸೂಚನೆ ನೀಡಿ ಹಿಂದಿರುಗಿದ್ದಾರೆ.
ಗೇಮ್‍ಪ್ಲ್ಯಾನ್: 'ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಿಗೆ ಕಾರಣವಾದ ಅಂಶಗಳ ಆಧಾರದ ಮೇಲೆ ಕೆ.ಎಸ್.ಈಶ್ವರಪ್ಪರವರು ಈಗಿನಿಂದಲೇ ಚುನಾವಣಾ ಗೇಮ್ ಪ್ಲ್ಯಾನ್ ರೂಪಿಸುತ್ತಿದ್ದಾರೆ. ಪಕ್ಷದ ತಳಮಟ್ಟದ ಕಾರ್ಯಕರ್ತರ ವಿಶ್ವಾಸ ಸಂಪಾದಿಸಿದರೆ ಪರಿಣಾಮಕಾರಿಯಾಗಿ ಚುನಾವಣೆ ಎದುರಿಸಬಹುದೆಂಬುವುದು ಅವರ ಚಿಂತನೆಯಾಗಿದೆ. ಈಶ್ವರಪ್ಪರವರು ಮನೆಗಳಿಗೆ ಭೇಟಿ ನೀಡಿದರೆ ಸಾಮಾನ್ಯ ಕಾರ್ಯಕರ್ತರಲ್ಲಿಯೂ ಹೊಸ ಉತ್ಸಾಹ ಮೂಡುತ್ತದೆ.
ಚುನಾವಣಾ ಸಂದರ್ಭಗಳಲ್ಲಿ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗುವುದರೊಳಗೆ ಕಾರ್ಯಕರ್ತರ ಮನೆಗಳಿಗೆ ಭೇಟಿ ಕಾರ್ಯ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ' ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡುತ್ತವೆ.
ಸೂಚನೆ: ಆದರೆ ಈಶ್ವರಪ್ಪರ ಈ ಭೇಟಿಯ ಹಿಂದೆ ಅಂತಹ ವಿಶೇಷವಿಲ್ಲ ಎಂದು ಸ್ಥಳೀಯ ಬಿಜೆಪಿಯ ಕೆಲ ಮೂಲಗಳು ಹೇಳುತ್ತವೆ.
ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರು ಪಕ್ಷದ ತಳಮಟ್ಟದ ಕಾರ್ಯಕರ್ತರನ್ನು ಮೊದಲು ವಿಶ್ವಾಸಕ್ಕೆ ಪಡೆದು ಚುನಾವಣಾ ಕಾರ್ಯತಂತ್ರ ರೂಪಿಸಿ ಎಂದು ಕಿವಿಮಾತು ಹೇಳಿದ್ದರು. ಅದರಂತೆ ನಾಯಕರು ಕಾರ್ಯಕರ್ತರ ಮನೆಗಳಿಗೆ ತೆರಳಿ ಉಭಯ ಕುಶಲೋಪರಿ ನಡೆಸುತ್ತಿದ್ದಾರೆ ಎಂದು ಹೇಳುತ್ತವೆ.
'ಮನೆಗೆ ಭೇಟಿ ನೀಡಿದ್ದು ಸಂತಸವಾಯಿತು' : ಬಿಜೆಪಿ ಕಾರ್ಯಕರ್ತ ಚೆನ್ನಬಸಪ್ಪ
'ಕೆ.ಎಸ್.ಈಶ್ವರಪ್ಪರಂತಹ ಹಿರಿಯ ನಾಯಕರು ನಮ್ಮಂತಹ ಸಾಮಾನ್ಯ ಕಾರ್ಯಕರ್ತರ ಮನೆಗೆ ಭೇಟಿ ನೀಡಿದಾಗ ಸಾಕಷ್ಟು ಸಂತಸವಾಗುತ್ತದೆ. ಕೆ.ಎಸ್.ಈಶ್ವರಪ್ಪರವರು ನಮ್ಮ ಮನೆಯ ಕುಟುಂಬ ಸದಸ್ಯರೊಂದಿಗೆ ಆತ್ಮೀಯವಾಗಿ ಮಾತನಾಡಿ, ಪರಿಚಯ ಮಾಡಿಕೊಂಡರು. ಉಪಹಾರ ಸೇವಿಸಿದರು. ಸ್ಥಳೀಯವಾಗಿ ಪಕ್ಷದ ಸಂಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈಶ್ವರಪ್ಪರ ಈ ನಡೆಯಿಂದ ನಮ್ಮ ವಾರ್ಡ್‍ನ ಪಕ್ಷದ ಕಾರ್ಯಕರ್ತರು ಸಾಕಷ್ಟು ಸಂತಸಗೊಂಡಿದ್ದಾರೆ' ಎಂದು ಗಾಡಿಕೊಪ್ಪದ ಬಿಜೆಪಿ ಮುಖಂಡ ಚೆನ್ನಬಸಪ್ಪರವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.







