ಕೊಡಗಿನಲ್ಲಿ ಭಾರೀ ಮಳೆ

ಮಡಿಕೇರಿ, ಆ.20: ಕೊಡಗು ಜಿಲ್ಲಾ ವ್ಯಾಪ್ತಿಯ ಬಹುತೇಕ ಭಾಗಗಳಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮತ್ತೆ ಮುಂಗಾರಿನ ವಾತಾವರಣ ನಿರ್ಮಾಣವಾಗಿದ್ದು, ಕಾವೇರಿಯ ಒಡಲು ಮಗದೊಮ್ಮೆ ತುಂಬಲಾರಂಭಿಸಿದೆ.
ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಮಧ್ಯಾಹ್ನದ ನಂತರದ ಅವಧಿಗಳಲ್ಲಿ ಮತ್ತು ರಾತ್ರಿಯ ಅವಧಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕಾವೇರಿಯ ಉಗಮಸ್ಥಾನವಾದ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಉತ್ತಮ ಮಳೆಯಿಂದ ‘ತ್ರಿವೇಣಿ’ ಸಂಗಮದಲ್ಲಿ ನದಿ ನಿರಿನ ಮಟ್ಟ ಹೆಚ್ಚಿದೆ. ಕಳೆದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ಭಾಗಮಂಡಲ ಮತ್ತು ತಲಕಾವೇರಿ ವ್ಯಾಪ್ತಿಯಲ್ಲಿ ಸರಾಸರಿ 3 ಇಂಟು ಮಳೆಯಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ನಂತರ ಆರಂಭಗೊಂಡ ಮಳೆ ಭಾನುವಾರ ಬೆಳಗ್ಗಿನವರೆಗೂ ಕಾಣಿಸಿಕೊಂಡಿತು. ಬಳಿಕ ಮಧ್ಯಾಹ್ನದವರೆಗೆ ಬಿಸಿಲ ವಾತಾವರಣ ಇತ್ತಾದರು ನಂತರ ಪನಹ ಮಳೆಯಾರಂಭವಾಗಿದ್ದು, ಮಳೆಯ ಪ್ರಮಾಣ ಮತ್ತಷ್ಟು ಚುರುಕುಗೊಂಡಲ್ಲಿ ಪ್ರವಾಹದ ಸಾಧ್ಯಗಳಿದೆ.
ಕೊಡಗು ಜಿಲ್ಲೆಯ ಮಳೆ ವಿವರ - ಕಳೆದ 24 ಗಂಟೆಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 28.4 ಮಿ.ಮೀ. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 46.7 ಮಿ.ಮೀ. ವೀರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 11.6 ಮಿ.ಮೀ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 26.9 ಮಿ.ಮೀ.
ಹೋಬಳಿವಾರು ಮಳೆ- ಮಡಿಕೇರಿ 54.2, ಸಂಪಾಜೆ 52, ಭಾಗಮಂಡಲ 49, ವೀರಾಜಪೇಟೆ 14.4, ಹುದಿಕೇರಿ 12, ಶ್ರೀಮಂಗಲ 10, ಪೆÀÇನ್ನಂಪೇಟೆ 17, ಅಮ್ಮತ್ತಿ 10.5, ಬಾಳೆಲೆ 6, ಸೋಮವಾರಪೇಟೆ 25.6, ಶನಿವಾರಸಂತೆ 42.2, ಶಾಂತಳ್ಳಿ 43, ಕೊಡ್ಲಿಪೇಟೆ 13, ಕುಶಾಲನಗರ 17, ಸುಂಟಿಕೊಪ್ಪ 21 ಮಿ.ಮೀ. ಮಳೆಯಾಗಿದೆ.
ಹಾರಂಗಿ ನೀರಿನ ಮಟ್ಟ- ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2856.47 ಅಡಿಗಳು, ಇಂದಿನ ನೀರಿನ ಒಳ ಹರಿವು 7525 ಕ್ಯೂಸೆಕ್, ಹೊರಹರಿವು ನದಿಗೆ 400, ನಾಲೆಗೆ 1200 ಕ್ಯೂಸೆಕ್.







