ಜೀ ಮೈನ್ಸ್ ನಲ್ಲಿ 100 ಶೇ. ಅಂಕ ಗಳಿಸಿದ ಕಲ್ಪಿತ್ ವೀರ್ವಾಲ್ ಗೆ ಲಿಮ್ಕಾ ದಾಖಲೆಯ ಗರಿ

ಹೊಸದಿಲ್ಲಿ, ಆ.20: ಜಾಯಿಂಟ್ ಎಂಟ್ರಾನ್ಸ್ ಎಕ್ಸಾಮಿನೇಶನ್ (ಜೀ ಮೈನ್ಸ್) ನಲ್ಲಿ ಪ್ರಪ್ರಥಮ ಬಾರಿಗೆ 100 ಶೇ. ಅಂಕ ಗಳಿಸಿ ದೇಶದ ಗಮನಸೆಳೆದಿದ್ದ ಉದಯಪುರದ ವಿದ್ಯಾರ್ಥಿ ಕಲ್ಪಿತ್ ವೀರ್ವಾಲ್ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರ್ಪಡೆಯಾಗಿದೆ.
ಜೀ ಮೈನ್ಸ್ ಪರೀಕ್ಷೆಯಲ್ಲಿ ಕಲ್ಪಿತ್ 360ರಲ್ಲಿ 360 ಅಂಕಗಳನ್ನು ಗಳಿಸಿದ್ದರು. ಈಗ ಅವರು ಮುಂಬೈಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್ ಮಾಡುತ್ತಿದ್ದಾರೆ.
2018ರ ಆವೃತ್ತಿಯ ‘ಶಿಕ್ಷಣದಲ್ಲಿನ ಸಾಧನೆ’ ವಿಭಾಗದಲ್ಲಿ ಕಲ್ಪಿತ್ ಅವರ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಲಿದೆ ಎಂದು ಲಿಮ್ಕಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
“ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸುವ ನಂಬಿಕೆ ನನಗಿತ್ತು. ಆದರೆ 360 ಅಂಕ ಗಳಿಸುತ್ತೇನೆ ಎಂದು ಭಾವಿಸಿರಲಿಲ್ಲ. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನನ್ನ ಹೆಸರು ದಾಖಲಾಗುತ್ತದೆ ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ” ಎಂದು ಕಲ್ಪಿತ್ ವೀರ್ವಾಲ್ ಪ್ರತಿಕ್ರಿಯಿಸಿದ್ದಾರೆ.





