ಸಾಗರ :ಸ್ವಚ್ಛ ಸಂಕಲ್ಪ ಜನಜಾಗೃತಿ ಮತ್ತು ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮ
.jpg)
ಸಾಗರ,ಆ.20 : ಸ್ವಚ್ಛತೆ ಬದುಕಿನ ಅಂಗವಾಗಬೇಕು. ಎಲ್ಲಿ ಸ್ವಚ್ಚ ಪರಿಸರ ಇರುತ್ತದೆಯೋ ಅಲ್ಲಿ ಆರೋಗ್ಯ ಇರುತ್ತದೆ ಎಂದು ಚಲನಚಿತ್ರ ನಟ ಲೂಸ್ ಮಾದ ಖ್ಯಾತಿಯ ಯೋಗೀಶ್ ತಿಳಿಸಿದರು.
ತಾಲ್ಲೂಕಿನ ಕಾರ್ಗಲ್‍ನಲ್ಲಿ ಶನಿವಾರ ಕಾರ್ಗಲ್-ಜೋಗ್ ಪಟ್ಟಣ ಪಂಚಾಯತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರ ಪುರಸ್ಕøತ ಸ್ವಚ್ಚಭಾರತ್ ಯೋಜನೆ ಅಡಿ ಸ್ವಚ್ಛ ಸಂಕಲ್ಪ ಜನಜಾಗೃತಿ ಮತ್ತು ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವೈಯಕ್ತಿಕ ಮತ್ತು ಸಮುದಾಯ ಸ್ವಚ್ಚತೆಯತ್ತ ಪ್ರತಿಯೊಬ್ಬರೂ ಗಮನ ಹರಿಸಬೇಕು. ನೈರ್ಮಲ್ಯಯುತ ಪರಿಸರದಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತದೆ. ದೇಶದ ಗಡಿಯಲ್ಲಿ ಸೈನಿಕರು ಶತೃಗಳು ಒಳಗೆ ನುಸಳದಂತೆ ಕಾಯುತ್ತಾರೆ. ಒಂದೊಮ್ಮೆ ಶತೃಗಳು ಒಳಗೆ ಬಂದರೆ ಬಂದೂಕಿನ ನಳಿಕೆಯಿಂದ ಅವರನ್ನು ಹೊರಗೆ ಅಟ್ಟುತ್ತಾರೆ. ಹಾಗೆಯೆ ದೇಶದ ಒಳಗೆ ನಾವು ಮಾಲಿನ್ಯವನ್ನು ಅಟ್ಟುವ ಮೂಲಕ ಸ್ವಚ್ಛತೆಯನ್ನು ಎತ್ತಿ ಹಿಡಿಯಬೇಕು ಎಂದು ತಿಳಿಸಿದರು.
ಸಿಯಾಚಿನ್ ಗಡಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧ ಸುಭಾಷ್‍ಚಂದ್ರ ತೇಜಸ್ವಿ ಗಡಿಯಲ್ಲಿ ಸೈನಿಕರು ದೇಶವನ್ನು ಸಂರಕ್ಷಣೆ ಮಾಡುವಾಗ ಎದುರಿಸುವ ವಿವಿಧ ಸವಾಲುಗಳನ್ನು ಕುರಿತು ಮಾಹಿತಿ ನೀಡಿದರು. ಜ್ಯೂನಿಯರ್ ಡ್ರಾಮ ಖ್ಯಾತಿಯ ಪ್ರಣೀತ್ ಮತ್ತು ಸಂಗಡಿರು `ಸ್ವಚ್ಚತೆ-ಬದ್ದತೆ’ ವಿಷಯ ಕುರಿತ ರೂಪಕ ಪ್ರದರ್ಶಿಸಿದರು.
ವೇದಿಕೆಯಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಶ್ರೀಮತಿ ಸುಂಕದಮನೆ, ಉಪಾಧ್ಯಕ್ಷೆ ವೆರೋನಿಕಾ ಲೋಪಿಸ್, ಆಶ್ರಯ ಸಮಿತಿ ಅಧ್ಯಕ್ಷ ಉಮೇಶ್, ಸಬ್ ಇನ್ಸ್‍ಪೆಕ್ಟರ್ ಪುಷ್ಪಾ, ಜಿಲ್ಲಾ ಯೋಜನಾ ನಿರ್ದೇಶಕ ಪ್ರಮೋದ್, ಸಾ.ಮಾ.ಇಲಿಯಾಸ್ ಇನ್ನಿತರರು ಹಾಜರಿದ್ದರು.







