ಮಳೆಗೆ ಧರೆಗುಳಿದ ಮರ: ಕಾರು ಜಖಂ

ಹಾಸನ, ಆ.20: ನಗರದ ಎವಿಕೆ ಕಾಲೇಜು ರಸ್ತೆಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕಾಂಪೌಂಡ್ ಬಳಿ ಇದ್ದ ಬೃಹತ್ ಮರವೊಂದು, ನಿಂತಿದ್ದ ಇನೋವಾ ಕಾರಿನ ಮೇಲೆ ಬಿದ್ದಿದ್ದು, ಕಾರಿನ ಒಳಗಿದ್ದ ಮಗು ಸೇರಿ ಚಾಲಕ ಪಾರಾದ ಘಟನೆ ಮಧ್ಯಾಹ್ನದ ಸಂಭವಿಸಿದೆ.
ಚನ್ನರಾಯಪಟ್ಟಣದ ನಿವಾಸಿ ಮಂಗಳ, ಕಾವ್ಯ ಹಾಗೂ 2 ವರ್ಷದ ಪುಟ್ಟ ಬಾಲಕ ಲೇಖನ್ ಇವರು ಹಾಸನಕ್ಕೆ ಚಾಲಕ ರವಿ ಜೊತೆಯಲ್ಲಿ ಬಂದಿದ್ದಾರೆ. ಸರಕಾರಿ ಪಾಲಿಟೆಕ್ನಿಕ್ ಬಳಿ ಬೃಹತ್ ಮರವೊಂದರ ಬಳಿ ಕಾರು ನಿಲ್ಲಿಸಲಾಗಿದ್ದು, ಮಗನಿಗೆ ಬಟ್ಟೆ ತರಲು ಮಗುವನ್ನು ಕಾರಲ್ಲಿಯೇ ಬಿಟ್ಟು ಹೋಗಿದ್ದಾರೆ. ಈ ವೇಳೆ ಭಾರಿ ಮಳೆಯಿಂದ ಮರ ಕೆಳಗೆ ಉರುಳಲು ಸದ್ದು ಮಾಡಿತು. ಎಚ್ಚೆತ್ತ ಚಾಲಕ ತಕ್ಷಣ ವಾಹನದಿಂದ ಕೆಳಗೆ ಇಳಿಯಲು ಮುಂದಾಗಿದ್ದಾರೆ. ಬಳಿಕ ಕಾರಿನ ಮೇಲೆ ಮರ ಬಿದ್ದು ಬಹುತೇಕ ಕಾರು ಜಖಂ ಆಗಿದೆ.
ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಎಚ್.ಎಸ್. ಅನೀಲ್ ಕುಮಾರ್ ಆಗಮಿಸಿ ವಿವರ ಪಡೆದರು. ಹಳೆಯ ಕಾಲದ ಮರಗಳು ಇದ್ದು, ಕೂಡಲೇ ತೆರವುಗೊಳಿಸದಿದ್ದರೇ ಇಂತಹ ಅನಾಹುತಗಳು ಸಂಭವಿಸುತ್ತಲೇ ಇರುತ್ತದೆ ಎಂದು ಸಾರ್ವಜನಿಕರು ದೂರಿದರು.





