ಪತ್ರಿಕಾ ವಿತರಕನ ಮೇಲೆ ಹಲ್ಲೆ:ಮೂವರ ಬಂಧನ

ಮಂಡ್ಯ, ಆ.20: ಪತ್ರಿಕೆ ವಿತರಕನ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ನಗರಸಭಾ ಸದಸ್ಯರೊಬ್ಬರು ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ರಂಜಿತ್, ಸಲ್ಮಾನ್, ಸಚಿನ್ ಎಂಬವರನ್ನು ಬಂಧಿಸಿದ್ದು, ನಗರದ 13ನೆ ವಾರ್ಡಿನ ಸದಸ್ಯ ಮಹೇಶ್‍ಕೃಷ್ಣ ಶನಿವಾರ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಹಲ್ಲೆಗೊಳಗಾದ ಆನಂದ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹೇಶ್‍ಕೃಷ್ಣ ತನ್ನ ಹೆಸರು ರೌಡಿಶೀಟರ್‍ನಲ್ಲಿದೆ ಎಂದಿದ್ದ ಹಿನ್ನೆಲೆಯಲ್ಲಿ ತಾನು ಆರ್‍ಟಿಐ ಅಡಿ ದಾಖಲೆಗಳನ್ನು ತೆಗೆದುಕೊಂಡಿದ್ದೆ. ಇದರಿಂದ ಮಹೇಶ್ ಕೃಷ್ಣ ವೈಮನಸ್ಸು ಹೊಂದಿದ್ದರು ಎಂದು ಆನಂದ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಆ.4ರಂದು ಮಹೇಶ್‍ಕೃಷ್ಣರ ಮನೆ ಬಳಿ ಗಲಾಟೆ ನಡೆಯುತ್ತಿದ್ದಾಗ ಅದನ್ನು ನಾನು ವೀಡಿಯೊ ಮಾಡಿದನೆಂಬ ಅನುಮಾನದಿಂದ ಮಹೇಶ್‍ಕೃಷ್ಣ ಹಾಗೂ ಅವರ ತಂದೆ ರಾಮಕೃಷ್ಣ ಗಲಾಟೆ ಮಾಡಿದರು. ಸ್ಥಳೀಯರು ಸಮಾಧಾನ ಮಾಡಿ ಕಳಿಸಿದ್ದರು.
ಆ.6ರಂದು ನನ್ನ ತಾಯಿ ರಾಗಿ ಮಿಲ್ ಮಾಡಿಸಲು ಹೋಗಿದ್ದು, ಅದನ್ನು ತರಲು ನಾನು ಮಿಲ್ ಬಳಿ ಹೋದಾಗ ರಂಜಿತ್, ಸಲ್ಮಾನ್, ಸಚಿನ್ ಎಂಬವರು ಮಿಲ್ ಬಳಿ ಬಂದು ಹಲ್ಲೆ ನಡೆಸಿದರು. ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಾದೆ ಎಂದು ಆನಂದ್ ದೂರಿನಲ್ಲಿ ತಿಳಿಸಿದ್ದಾರೆ.







