ಆ.22: ಅಳಿಕೆ ರಾಮಯ್ಯ ರೈ ಶತಮಾನೋತ್ಸವ
ಮಂಗಳೂರು, ಆ.20: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಸಂಯುಕ್ತಾಶ್ರಯದಲ್ಲಿ ತೆಂಕುತಿಟ್ಟು ಯಕ್ಷಗಾನದ ಕಲಾವಿದ ಅಳಿಕೆ ರಾಮಯ್ಯ ರೈಯ ಜನ್ಮಶತಮಾನೋತ್ಸವ ಕಾರ್ಯಕ್ರಮ ಆ.22ರಂದು ಅಪರಾಹ್ನ 2ಕ್ಕೆ ನಗರದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾದಲ್ಲಿ ಜರಗಲಿದೆ.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ ಸಮಾರಂಭದ ಅಧ್ಯಕ್ಷತೆ ವಹಿಸುವರು. ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ ಕಲಾಕಾರ್ಯಕ್ರಮಗಳನ್ನು ಉದ್ಘಾಟಿಸುವರು.ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅಳಿಕೆಯವರ ಬಗ್ಗೆ ಸಂಸ್ಮರಣ ಭಾಷಣ ಮಾಡುವರು. ಬಯಲಾಟ ಅಕಾಡಮಿಯ ಸದಸ್ಯ ಪಿ.ಕಿಶನ್ ಹೆಗ್ಡೆ ಆಶಯ ನುಡಿಗಳನ್ನಾಡುವರು. ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಮಂಗಳೂರು ವಿವಿಯ ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾಧಿಕಾರಿ ಡಾ.ರಾಜಶ್ರೀ ಮುಖ್ಯ ಅತಿಥಿಗಳಾಗಿರುವರು.
ಕಾರ್ಯಕ್ರಮದಲ್ಲಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಪಿ.ಕಿಶನ್ ಹೆಗ್ಡೆ ಸಂಪಾದಕತ್ವದಲ್ಲಿ ಅಕಾಡಮಿ ಪ್ರಕಟಿಸಿದ ‘ಮಹಾನ್ ಕಲಾವಿದ ಅಳಿಕೆ ರಾಮಯ್ಯ ರೈ ಶತಕ ಸ್ಮತಿ’ ಕೃತಿಯನ್ನು ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಬಿಡುಗಡೆಗೊಳಿಸುವರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಕೃತಿ ಪರಿಚಯ ಮಾಡುವರು. ಹಿರಿಯ ಕಲಾವಿದ ಡಾ.ಕೋಳ್ಯೂರು ರಾಮಚಂದ್ರ ರಾವ್,ಪ್ರಸಂಗಕರ್ತ ನಿತ್ಯಾನಂದ ಕಾರಂತ ಪೊಳಲಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಸದಸ್ಯ ತಾರಾನಾಥ ವರ್ಕಾಡಿ ಉಪಸ್ಥಿತರಿರುವರು.
ಈ ಸಂದರ್ಭ ಅಳಿಕೆ ರಾಮಯ್ಯ ರೈ ಕುಟುಂಬದ ಪರವಾಗಿ ಅಳಿಕೆಯವರ ಹಿರಿಯ ಪುತ್ರ ಅಳಿಕೆ ಬಾಲಕೃಷ್ಣ ರೈ ಅವರಿಗೆ ಅಕಾಡಮಿಯ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಿರಿಯ ಯಕ್ಷಗಾನ ಕಲಾವಿದ ದಿನೇಶ ಅಮ್ಮಣ್ಣಾಯ,ಜೆಪ್ಪುದಯಾನಂದ ಶೆಟ್ಟಿ,ಕೊಳ್ತಿಗೆ ನಾರಾಯಣ ಗೌಡ,ಉಬರಡ್ಕ ಉಮೇಶ ಶೆಟ್ಟಿ ಮತ್ತು ಮುಂಡಾಜೆ ಬಾಲಕೃಷ್ಣ ಶೆಟ್ಟಿಯವರಿಗೆ ಅಳಿಕೆ ರಾಮಯ್ಯ ರೈ ಶತಮಾನೋತ್ಸವ ಕಲಾಗೌರವ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.







