ಮೆಟ್ರೋ ಅನುಕೂಲಕರ ಸಾರಿಗೆ: ಕೆ.ಜೆ.ಜಾರ್ಜ್

ಬೆಂಗಳೂರು, ಆ.21: ನಮ್ಮ ಮೆ ಸಾರಿಗೆ ವ್ಯವಸ್ಥೆಗೆ ಹೊಸ ಗಾಂಭೀರ್ಯ ತಂದಿದ್ದು, ಇದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಸೋಮವಾರ ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಭಾಂಗಣದಲ್ಲಿ ಹಿರಿಯ ಛಾಯಾಗ್ರಹಕ ಕೆ.ವೆಂಕಟೇಶ್ ಸೆರೆ ಹಿಡಿದಿರುವ ‘ನಮ್ಮ ಮೆಟ್ರೊ ಸುಂದರ, ವಿರೂಪ ಹಾಗೂ ಕುರೂಪ ಮುಖಗಳ’ ಛಾಯಾಚಿತ್ರಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಪ್ರತಿದಿನ ಮೂರು ಲಕ್ಷಕ್ಕೂ ಅಧಿಕ ಜನರು ಮೆಟ್ರೊ ಸಾರಿಗೆ ಬಳಕೆ ಮಾಡುತ್ತಿದ್ದಾರೆ. ಇದು ಸಮಸ್ಯೆಗಳಿಂದ ಮುಕ್ತವಾಗಿದ್ದು, ಉದ್ಯಾನ ನಗರಿಯ ನಾಗರಿಕರಿಗೆ ಅವರ ಸಮಯ ಹಾಗೂ ಶಕ್ತಿಯನ್ನು ಉಳಿಸುವಂಥ ಸರಿಯಾದ ಸಮಯಕ್ಕೆ ತ್ವರಿತ ಗತಿಯ ಪ್ರಯಾಣವನ್ನು ಕಲ್ಪಿಸುತ್ತಿದೆ ಎಂದ ಹೇಳಿದರು.
ಸಂಚಾರ ದಟ್ಟಣೆ, ಖಾಸಗಿ ವಾಹನಗಳಿಂದ ಮುಕ್ತಿ ನೀಡಿದೆ ಎಂದ ಅವರು, ಛಾಯಾಗ್ರಹಕ ವೆಂಟೇಶ್ ಅವರು ಮೆಟ್ರೊ ಬಗ್ಗೆ ವಿಶೇಷವಾಗಿ ಸೆರೆ ಹಿಡಿದಿರುವ ಛಾಯಾಚಿತ್ರಗಳು ಎಲ್ಲರನ್ನು ಆಕರ್ಷಿಸುತ್ತಿವೆ. ವಿದ್ಯಾರ್ಥಿಗಳು, ಸಾರ್ವಜನಿಕರು ಈ ಪ್ರದರ್ಶನದಲ್ಲಿ ಪಾಲ್ಗೊಂಡು, ಮೆಟ್ರೊ ನಡೆದು ಬಂದ ಹಿನ್ನಲೆ ಬಗ್ಗೆ ತಿಳಿದುಕೊಳ್ಳಬಹುದೆಂದು ಸಲಹೆ ಮಾಡಿದರು.
ಐದು ದಿನ ಪ್ರದರ್ಶನ: ಬೆಂಗಳೂರಿಗರ ಅತ್ಯಂತ ನೆಚ್ಚಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎನ್ನಿಸಿಕೊಂಡಿರುವ ನಮ್ಮ ಮೆಟ್ರೋ, ಉದ್ಯಾನ ನಗರಿಯ ಗತ್ತನ್ನು ಹೆಚ್ಚಿಸಿದೆ. ರಾಜಧಾನಿಯ ಪ್ರಮುಖ ಬೀದಿಗಳ ಮೇಲೆ ಬೃಹದಾಕಾರದಲ್ಲಿ ಚಾಚಿಕೊಂಡಿರುವ ಮೆಟ್ರೋ ಲೈನ್‌ಗಳು ಸಿಲಿಕಾನ್ ಸಿಟಿಯ ಘನತೆಗೆ ಕನ್ನಡಿ ಎನ್ನಿಸಿವೆ.
ಇಂಥ ಬೆಂಗಳೂರಿನ ವಿವಿಧ ಮುಖಗಳನ್ನು ತೆರೆದಿಡುವ ನಮ್ಮ ಮೆಟ್ರೋದ ಅಪರೂಪದ ನೈಜವಾದ ಛಾಯಾಚಿತ್ರಗಳ ಪ್ರದರ್ಶನ ಇಂದಿನಿಂದ ಆ.25ವರೆಗೂ ನಡೆಯಲಿದ್ದು, ಮೆಟ್ರೋ ಬಗೆಗಿನ 50ಕ್ಕೂ ಹೆಚ್ಚಿನ ಛಾಯಾಚಿತ್ರಗಳಿವೆ ಎಂದು ಛಾಯಾಗ್ರಹ ಕೆ.ವೆಂಕಟೇಶ್ ಮಾಹಿತಿ ನೀಡಿದರು.







