ಆರೋಪಿ ಎ.ಜೆ.ಅಶೋಕ್ ಬಂಧನಕ್ಕೆ ಕ್ರೈಸ್ತ ಸಮುದಾಯ ಆಗ್ರಹ
ದಿ ಮೆಥಡಿಸ್ಟ್ ಚರ್ಚ್‌ಗೆ ಸಂಬಂಧಿಸಿದ ಜಮೀನಿಗೆ ಕನ್ನ
ಬೆಂಗಳೂರು, ಆ.21: ರಾಜ್ಯದಲ್ಲಿ ದಿ ಮೆಥಡಿಸ್ಟ್ ಚರ್ಚ್‌ಗೆ ಸಂಬಂಧಿಸಿದ ಜಮೀನುಗಳಿಗೆ ಸುಳ್ಳು ದಾಖಲೆ ಸೃಷ್ಟಿಸಿ ವಶಪಡಿಸಿಕೊಳ್ಳಲು ಮುಂದಾಗಿರುವ ಆರೋಪಿ ಎ.ಜೆ.ಅಶೋಕ್‌ರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಕ್ರೈಸ್ತ ಸಮುದಾಯ ಇಂದು ನಗರದಲ್ಲಿ ಬೃಹತ್ ಧರಣಿ ನಡೆಸಿತು.
ರಾಜ್ಯದ ವಿವಿಧೆಡೆ ದಿ ಮೆಥಡಿಸ್ಟ್ ಚರ್ಚ್‌ಗೆ ಸಂಬಂಧಿಸಿದ ನೂರಾರು ಎಕರೆ ಜಮೀನು ಹಾಗೂ ಪ್ರತಿ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿವೆ. ಈ ಜಮೀನುಗಳಿಗೆ ಆರೋಪಿ ಎ.ಜೆ.ಅಶೋಕ್ ನಕಲಿ ದಾಖಲೆ ಸೃಷ್ಟಿಸಿ ವಶಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಗೂಂಡಾಗಳಿಂದ ಬೆದರಿಕೆ ಒಡ್ಡುತ್ತಾನೆ ಎಂದು ಧರಣಿ ನಿರತರು ಆರೋಪಿಸಿದರು.
ಈ ಕುರಿತು ಕ್ರೈಸ್ತ ಮುಖಂಡ ಜಯದೇವ ಪ್ರಸನ್ನ ಮಾತನಾಡಿ, ತಮಿಳುನಾಡು ಮೂಲದ ಎ.ಜೆ.ಅಶೋಕ್ ಎನ್ನುವ ಆರೋಪಿ ಇಡೀ ಕ್ರೈಸ್ತ ಸಮುದಾಯದವನಾಗಿ, ಕ್ರೈಸ್ತ ಸಮುದಾಯದ ಆಸ್ತಿ ಪಾಸ್ತಿಗಳನ್ನು ಕಬಳಿಸಲು ಮುಂದಾಗಿದ್ದಾನೆ. ತನ್ನ ಕಾನೂನು ಬಾಹಿರ ಚಟುವಟಿಕೆಗಳಿಗೆ ಗೂಂಡಾಗಳನ್ನು ನೇಮಿಸಿಕೊಂಡಿದ್ದಾನೆ. ಈ ಬಗ್ಗೆ ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.
ಶಾಂತಿ, ಸಹನೆ ಹಾಗೂ ಸೌಹಾರ್ದತೆಗೆ ಹೆಸರಾಗಿರುವ ಕ್ರೈಸ್ತ ಸಮುದಾಯದ ಆಸ್ತಿಪಾಸ್ತಿಯನ್ನು ಗೂಂಡಾಗಳು ವಶಪಡಿಸಿಕೊಳ್ಳಲು ಮುಂದಾಗಿದ್ದರು ನಮ್ಮ ರಕ್ಷಣೆಗೆ ಯಾರು ಇಲ್ಲವಾಗಿದ್ದಾರೆ. ಇದರಿಂದ ಕ್ರೈಸ್ತ ಪಾದ್ರಿಗಳು, ಶಾಲಾ-ಕಾಲೇಜಿನ ಮುಖ್ಯಸ್ಥರಿಗೆ ಆತಂಕವಾಗಿದೆ. ಹೀಗಾಗಿ ಪೊಲೀಸ್ ಇಲಾಖೆ ಆರೋಪಿ ಎ.ಜೆ.ಅಶೋಕ್‌ರನ್ನು ಕೂಡಲೇ ಬಂಧಿಸಿ ಕ್ರೈಸ್ತ ಸಮುದಾಯದ ಜನತೆಗೆ ಧೈರ್ಯ ತುಂಬಬೇಕೆಂದು ಅವರು ಒತ್ತಾಯಿಸಿದರು.







