ತುಮಕೂರು: ರೈತರಿಗೆ ಭೂಮಿ ಹಕ್ಕು ನೀಡುವಂತೆ ಒತ್ತಾಯಿಸಿ ಧರಣಿ

ತುಮಕೂರು,ಆ.21:ತುಮಕೂರು ಜಿಲ್ಲೆಯಲ್ಲಿ ಕಳೆದ 30-40 ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ನಡೆಸುತ್ತಿರುವ ರೈತರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು ಹಾಗೂ ಭೂಮಿ ಮತ್ತು ವಸತಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕುಂ ವಂಚಿತರ ಹೋರಾಟ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.
ನಗರದ ಟೌನ್‍ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿದ ಸಮತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಪಿಯುಸಿಎಲ್ ಅಧ್ಯಕ್ಷ ಹಾಗು ಹಿರಿಯ ಚಿಂತಕ ಕೆ.ದೊರೈರಾಜು, ಕಳೆದ ಹತ್ತಾರು ವರ್ಷಗಳಿಂದ ಈ ರಾಜ್ಯದ ಬಡವರು, ಅರಣ್ಯ ಭೂಮಿ, ಗೋಮಾಳ,ಹುಲ್ಲುಗಾವಲು ಇನ್ನಿತರ ಸರಕಾರಿ ಜಾಗಗಳನ್ನು ಹೊಟ್ಟೆಪಾಡಿಗಾಗಿ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ.ಇದನ್ನು ತಮ್ಮ ಹೆಸರಿಗೆ ಮಂಜೂರು ಮಾಡಿಕೊಂಡುವಂತೆ ಫಾರಂ 50-53 ಸಲ್ಲಿಸಿ 30-40 ವರ್ಷಗಳು ಕಳೆದಿದ್ದೂ ಇದುವರೆಗೂ ಅವರಿಗೆ ಭೂಮಿಯ ಹಕ್ಕು ನೀಡಿಲ್ಲ ಎಂದು ದೂರಿದರು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡಿರುವ ಬಡವರು ಸರಕಾರದ ನಿಯಮದಂತೆ 94 ಸಿ. ಮತ್ತು 94 ಸಿ.ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರೂ ಕೆಲವರಿಗೆ ಮಾತ್ರ ಹಕ್ಕು ಪತ್ರ ನೀಡಿ, ಮತ್ತೆ ಕೆಲವರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ.ಹತ್ತಾರು ವರ್ಷದಿಂದ ಒಚಿದೆಡೆ ಬದುಕಿದ್ದರೂ ತಲೆಯ ಮೇಲೆ ಸೂರಿಲ್ಲದೆ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರಕಾರಕ್ಕೆ ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಈ ಹಿನ್ನೆಲೆಯಲ್ಲಿ ಹೋರಾಟ ಅನಿರ್ವಾಯ ಎಂದರು. ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ತಿಪಟೂರು ಕೃಷ್ಣ,ಜನಾಂದೋಲ ಮಹಾಮೈತ್ರಿಯ ಸಿ.ಯತಿರಾಜು, ದಲಿತ ಸಂಘರ್ಷ ಸಮಿತಿಯ ಕುಂದೂರ ತಿಮ್ಮಯ್ಯ,ಹೊಯ್ಸಳ ವೇದಿಕೆಯ ಜಯರಾಮೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.







