ಆ.23ಕ್ಕೆ ಸಂಚಾರಿ ತಾರಾಲಯ ಉದ್ಘಾಟನೆ: ಸಚಿವ ಎಂ.ಆರ್.ಸೀತಾರಾಂ
ಶಾಲಾ ಅಂಗಳಕ್ಕೆ ‘ಆಕಾಶ ಭಾಗ್ಯ’

ಬೆಂಗಳೂರು, ಆ.21: ‘ಶಾಲಾ ಆವರಣಕ್ಕೆ ತಾರಾಲಯ’ ಎಂಬ ಘೋಷಣೆಯೊಂದಿಗೆ ದೇಶದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ರಾಜ್ಯದ ಎಲ್ಲ ಸರಕಾರಿ ಶಾಲಾ ಕಾಲೇಜುಗಳ ಆವರಣಕ್ಕೆ ‘ಸಂಚಾರಿ ಡಿಜಿಟಲ್ ತಾರಾಲಯ’ ಯೋಜನೆಗೆ ಆ. 23ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಂ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಾರಾಲಯದ ಕಲ್ಪನೆ ಕುರಿತು ವಿಶೇಷವಾಗಿ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಸಂಚಾರಿ ಡಿಜಿಟಲ್ ತಾರಾಲಯವನ್ನು ಶಾಲಾ-ಕಾಲೇಜುಗಳಿಗೆ ಕೊಂಡೊಯ್ಯಲಾಗುವುದು ಎಂದರು.
ಸುಮಾರು 6 ಕೋಟಿ ರೂ.ವೆಚ್ಚದಲ್ಲಿ 5 ಸಂಚಾರಿ ತಾರಾಲಯಗಳನ್ನು ಖರೀದಿಸಲಾಗಿದೆ. ನಭೋಮಂಡಲದ ವಿಸ್ಮಯ, ನಿಗೂಢತೆ, ಸೌರ ಮಂಡಲ ಮತ್ತಿತರ ಚಲನವಲನಗಳ ಕುರಿತು ಸಂಚಾರಿ ತಾರಾಲಯಗಳಲ್ಲಿ ಮಾಹಿತಿ ಅಳವಡಿಸಲಾಗಿದ್ದು, ಇದನ್ನು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ತಿಳಿಸಲು ಉದ್ದೇಶಿಸಲಾಗಿದೆ ಎಂದರು.
ಸಂಚಾರಿ ತಾರಾಲಯ ವಿದ್ಯುಕ್ತ ಉದ್ಘಾಟನೆಯ ನಂತರ, ಸಂಚಾರಿ ವಾಹನಗಳು ರಾಜ್ಯಾದ್ಯಂತ ಸಂಚರಿಸಲಿವೆ. ಪ್ರತಿ ಒಂದು ಸಂಚಾರಿ ವಾಹನ ಕನಿಷ್ಠ 6 ಜಿಲ್ಲೆಗಳಲ್ಲಿ ಸಂಚರಿಸುವ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಸೀತಾರಾಂ ಇದೇ ವೇಳೆ ವಿವರಿಸಿದರು.
ಬೆಳಗಾವಿ ವಿಭಾಗಕ್ಕೆ ಎರಡು ಹಾಗೂ ಬೆಂಗಳೂರು, ಮೈಸೂರು ಮತ್ತು ಕಲಬುರಗಿ ವಿಭಾಗಕ್ಕೆ ತಲಾ ಒಂದರಂತೆ ಸಂಚಾರಿ ತಾರಾಲಯ ವಾಹನಗಳನ್ನು ನಿಯೋಜನೆ ಮಾಡಲಾಗುವುದು. ಪ್ರತಿ ಜಿಲ್ಲೆಗಳಲ್ಲಿ ಎರಡು ತಿಂಗಳ ಅವಧಿಗೆ ಸಂಚರಿಸಲಿದ್ದು, ಬರುವ ಫೆಬ್ರವರಿ ಅಂತ್ಯದೊಳಗೆ ಎಲ್ಲ ಜಿಲ್ಲಾ, ತಾಲೂಕುಗಳ ಶಾಲಾ ಕಾಲೇಜುಗಳಿಗೆ ಭೇಟಿ ನೀಡಲಿವೆ ಎಂದು ಅವರು ತಿಳಿಸಿದರು.
ಮಂಗಳೂರು ಬಳಿಯ ಪಿಳಿಕುಳದಲ್ಲಿ ಸುಮಾರು 40 ಕೊಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ತ್ರಿಡಿ ಡಿಜಿಟಲ್ ತಾರಾಲಯವನ್ನು ನವೆಂಬರ್ ವೇಳೆಗೆ ಲೋಕಾರ್ಪಣೆ ಮಾಡಲಾಗುವುದು. ಅಲ್ಲದೆ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಲ್ಲೂ ಮಿನಿ ತಾರಾಲಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
-ಎಂ.ಆರ್.ಸೀತಾರಾಂ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ







