ಹಬ್ಬದ ಆಚರಣೆಗಳಲ್ಲಿ ಜನರು ಅನುಚಿತ ರೀತಿಯಲ್ಲಿ ವರ್ತಿಸಬಾರದು: ಜಗದೀಶ್
ಗೌರಿಗಣೇಶ ಮತ್ತು ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ

ಬಣಕಲ್, ಆ.21: ಯಾವುದೇ ಧರ್ಮದ ಹಬ್ಬಗಳಾದರೂ ಶಾಂತಿಯಿಂದ ಆಚರಿಸಬೇಕೇ ಹೊರತು ಪರರಿಗೆ ತೊಂದರೆ ಕೊಡಬಾರದು. ಹಬ್ಬದ ಆಚರಣೆ ನೆವದಲ್ಲಿ ಕಾನೂನು ಪಾಲನೆಗೆ ಭಂಗವನ್ನುಂಟು ಮಾಡುವ ಅನುಚಿತ ವರ್ತನೆಗಳು ಕಂಡು ಬಂದರೆ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಮೂಡಿಗೆರೆ ಪೋಲಿಸ್ ವೃತ್ತ ನಿರೀಕ್ಷಕ ಜಗದೀಶ್ ಎಚ್ಚರಿಸಿದರು.
ಅವರು ಸೋಮವಾರ ಬಣಕಲ್ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಯಾವುದೇ ಹಬ್ಬಗಳು ನಡೆದರೂ ಕೋಮು ಸೌಹಾರ್ದತೆಯಿಂದ ನಡೆದರೆ ಒಳಿತು. ಕಳೆದ ಎರಡು ವರ್ಷಗಳಲ್ಲಿ ಪೋಲಿಸರಿಗೆ ಈ ಹಬ್ಬದ ಆಚರಣೆಗಳಲ್ಲಿ ಕೆಲವು ಕಿಡಿಗೇಡಿಗಳು ಮಧ್ಯ ಪ್ರವೇಶಿಸಿ ಮೆರವಣಿಗೆ ಸಂದರ್ಭದಲ್ಲಿ ಡಿಜೆ ಬಳಸಿ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸಲು ಭಂಗ ತಂದಿದ್ದರು. ಇದರಿಂದ ಪೋಲಿಸ್ ಅಧಿಕಾರಿಗಳಿಗೆ ಸಾರ್ವಜನಿಕರ ವರ್ತನೆಯಿಂದ ಮನಸ್ಸಿಗೆ ತುಂಬಾ ನೋವಾಗಿತ್ತು ಇದು ಮರುಕಳಿಸಬಾರದು ಎಂದು ಖಾರವಾಗಿ ನುಡಿದರು.
ಸಮಿತಿಯವರು ಹಬ್ಬಗಳನ್ನು ತುಂಬಾ ಜವಾಬ್ದಾರಿಯಿಂದ ಆಚರಿಸಬೇಕು. ಮಧ್ಯಪಾನ ಮಾಡಿ ಹಬ್ಬದ ಮೆರವಣಿಗೆಯಲ್ಲಿ ರಾ.ಹೆದ್ದಾರಿಗಳಲ್ಲಿ ವಾಹನಗಳಿಗೂ ಸಂಚರಿಸಲು ತೊಂದರೆ ಕೊಟ್ಟು ಮನಸ್ವೆಚ್ಚೆಯಿಂದ ಕುಣಿದು ತೊಂದರೆ ನೀಡುವುದರಿಂದ ಉತ್ತಮವಾಗಿ ಹಬ್ಬ ಆಚರಿಸಲು ಸಾಧ್ಯವಿಲ್ಲ.ಹಬ್ಬದ ಸಮಯದಲ್ಲಿ ಕರ್ತವ್ಯ ನಿರತ ಪೋಲಿಸರೊಂದಿಗೆ ಅಸಭ್ಯ ವರ್ತನೆ ಮಾಡದೇ ಕಾನೂನಿಗೆ ತೊಡಕಾಗದಂತೆ ನಡೆದು ಸಹಕರಿಸಬೇಕು.
ಸಭೆಯಲ್ಲಿ ಜಿಪಂ ಸದಸ್ಯ ಶಾಮಣ್ಣ, ಪೋಲಿಸ್ ಮುಖ್ಯ ಪೇದೆ ರುದ್ರೇಶ್, ಗ್ರಾಮಸ್ಥರಾದ ಗಣೇಶ್, ಬಿ.ಶಿವರಾಂ ಶೆಟ್ಟಿ ಮಾತನಾಡಿದರು. ಬಣಕಲ್ ಠಾಣಾಧಿಕಾರಿ ಮೂರ್ತಿ, ಎಎಸ್ಸೈ ಶಶಿಧರ್, ಬಾಬು, ತರುವೆ ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಂ.ಭರತ್, ವರ್ತಕರ ಸಂಘದ ಅಧ್ಯಕ್ಷ ಟಿ.ಎಂ.ಗಜೇಂದ್ರ, ಇರ್ಪಾನ್, ಎ.ಸಿ.ಅಯೂಬ್, ರಮೇಶ್‌ಗೌಡ ಗುಡ್ಡೆಟ್ಟಿ, ವಿನಯ್‌ಶೆಟ್ಟಿ, ಮಾಜಿ ಸೈನಿಕ ಗಿರಿಯಪ್ಪ ಮಂಜಯ್ಯ, ಸಬ್ಲಿ ದೇವರಾಜು ಭಾಗವಹಿಸಿದ್ದರು.







