ಬೆಳೆ ವಿಮೆಗೆ ಆಗ್ರಹಿಸಿ ರಾಜ್ಯ ರೈತ ಸಂಘ, ದಲಿತ ಸಂಘಟನೆಯಿಂದ ಧರಣಿ
.jpg)
ಹಾಸನ, ಆ.21: ಸಂಪೂರ್ಣ ಸಾಲಮನ್ನಾ, ಡಾ. ಸ್ವಾಮಿನಾಥ ಸಮಿತಿ ವರದಿ ಜಾರಿಗೆ ಒತ್ತಾಯಿಸಿ, ರೈತರ ಬೆಳೆವಿಮೆ ನೀಡಲು ಆಗ್ರಹಿಸಿ ಹಾಗೂ ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದತಿಗೆ ಆಗ್ರಹಿಸಿ ರಾಜ್ಯ ರೈತ ಸಂಘ, ದಲಿತ ಸಂಘಟನೆಯಿಂದ ಡಿಸಿ ಕಛೇರಿ ಮುಂದೆ ಧರಣಿ ನಡೆಸಿದರು.
ಡಾ. ಸ್ವಾಮಿನಾಥನ್ ರವರ ಕೃಷೀ ಆಯೋಗದ ಸಲಹೆಯಂತೆ ರೈತರ ಬೆಳೆಗೆ ಉತ್ಪಾದನಾ ವೆಚ್ಚದ ಶೇ. 150ನ್ನು ಬೆಂಬಲ ಬೆಲೆಯಾಗಿ ನಿಗದಿಪಡಿಸುವುದು ಹಾಗೂ ರೈತರಿಗೆ ಖಾತರಿಯಾಗಿ ದೊರೆಯುವಂತೆ ಅಗತ್ಯ ಕ್ರಮವಹಿಸುವುದು. ಅಲ್ಲದೇ ಅಗ್ಗದ ದರದಲ್ಲಿ ವಿದೇಶಿ ಕೃಷಿ ಉತ್ಪನ್ನಗಳು ನಮ್ಮ ಮಾರುಕಟ್ಟೆಗಳನ್ನು ಹಿಡಿಯುವ ಕುತಂತ್ರವನ್ನು ಸೋಲಿಸಲು ಮತ್ತು ದೇಶೀಯ ಕೃಷಿ ಉತ್ಪನ್ನಗಳ ಬೆಲೆ ಕುಸಿಯದಂತೇ ತಡೆಯಲು ವಿದೇಶೀ ಕೃಷಿ-ಉತ್ಪನ್ನಗಳ ಮೇಲೆ ಗರಿಷ್ಟ ಅಗತ್ಯ ಸುಂಕವನ್ನು ಹೇರಬೇಕು.ಕರ್ನಾಟಕದಲ್ಲಿ ಕಳೆದ 5-6 ವರ್ಷಗಳಿಂದ ನಿರಂತರವಾಗಿ ಬೆಂಬಿಡದೇ ಕಾಡುತ್ತಿರುವ ಬರಗಾಲಗಳು ಮತ್ತು ಅತಿವñಷ್ಟಿಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೋತಿರುವುದು ರೈತರ, ಕೃಷಿ ಕಾರ್ಮಿಕರ ಹಾಗೂ ದಲಿತರ ಸಾಲದ ಬಾಧೆ ತೀವ್ರಗೊಳ್ಳಲು ಕಾರಣವಾಗಿದೆ ಎಂದು ಧರಣಿ ನಿರತರು ದೂರಿದರು.
ಜನತೆಯ ತೀವ್ರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರವು ಸಹಕಾರಿ ಬ್ಯಾಂಕುಗಳ ಅಲ್ಪಾವಧಿ ಬೆಳೆಸಾಲದಲ್ಲಿ 50,000 ರೂ. ಅಸಲು ಮತ್ತು ಬಡ್ಡಿಯನ್ನು ಮನ್ನಾ ಘೋಷಿಸಿರುವುದು ಸ್ವಾಗತಾರ್ಹವಾದರೂ ಅದು ಸಮರ್ಪಕವಾಗಿಲ್ಲ. ಸಹಕಾರಿ ಬ್ಯಾಂಕುಗಳ ಇನ್ನುಳಿದ 2578 ಕೋಟಿ ರೂ. ಮನ್ನಾ ಮಾಡಬೇಕಾಗಿದೆ. ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ಬ್ಯಾಂಕುಗಳಲ್ಲಿನ ಶೇ.80ರಷ್ಟಿರುವ ರೈತರ, ಕೃಷೀ ಕಾರ್ಮಿಕರ ಹಾಗೂ ದಲಿತ ಸಾಲ ಮನ್ನಾ ಮಾಡಲಾಗುವುದಿಲ್ಲ ಎಂಬ ಜನದ್ರೋಹೀ ನಿಲುವನ್ನು ಕೇಂದ್ರಸರ್ಕಾರವು ತಳೆದಿದೆ. ಆದ್ದರಿಂದ ರೈತರು, ಕೃಷಿ ಕಾರ್ಮಿಕರು ಮತ್ತು ದಲಿತರಿಗೆ ಸಂಬಂಧಿಸಿದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಮತ್ತು ಖಾಸಗಿ ರಂಗದ ಎಲ್ಲ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು ಹಾಗೂ ಅಗತ್ಯ ಹೊಸ ಸಾಲಗಳನ್ನು ನೀಡಬೇಕೆಂದು ಧರಣಿ ನಿರತರು ಒತ್ತಾಯಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲಾ ಬೇಡಿಕೆಗಳನ್ನು ಕೂಡಲೇ ಮಾನ್ಯಮಾಡಬೇಕೆಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಈ ವೇಳೆ ಧರಣಿ ನಿರತರು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‍ಎಸ್) ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್ ಕುಮಾರ್, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್, ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಎಂ.ಸಿ.ಡೋಂಗ್ರೆ, ದಲಿತ ಹಕ್ಕುಗಳ ಸಮಿತಿಯ ಎಂ.ಜಿ. ಪೃಥ್ವಿ ಇತರರು ಇದ್ದರು.







