ಇನ್ಪೋಸಿಸ್ ಶೇರು ದರ ಇಳಿಕೆಯ ಹಿನ್ನೆಲೆ: ವಿಮಾ ಸಂಸ್ಥೆಗಳ ಶೇರು ಖರೀದಿ ಭರಾಟೆ

ಹೊಸದಿಲ್ಲಿ, ಆ.21: ವಿಶಾಲ್ ಸಿಕ್ಕ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಇನ್ಫೋಸಿಸ್ ಸಂಸ್ಥೆಯ ಶೇರುಗಳ ದರದಲ್ಲಿ ಭಾರೀ ಇಳಿಕೆಯಾದ ಕಾರಣ ಸಂಸ್ಥೆಗೆ ಸುಮಾರು 22,500 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಈ ಮಧ್ಯೆ , ಇನ್ಪೋಸಿಸ್ ಶೇರುಗಳ ದರ ಇಳಿಕೆಯ ಲಾಭವನ್ನು ಪಡೆಯಲು ಮುಂದಾಗಿರುವ ಕೆಲವು ವಿಮಾ ಸಂಸ್ಥೆಗಳು ಬೃಹತ್ ಪ್ರಮಾಣದಲ್ಲಿ ಶೇರುಗಳ ಖರೀದಿಯಲಿ್ಲ ತೊಡಗಿರುವ ಬಗ್ಗೆ ವರದಿಯಾಗಿದೆ.
ತಾವು ಸುಮಾರು 800 ಕೋಟಿ ರೂ.ವೌಲ್ಯದ ಶೇರುಗಳನ್ನು ಖರೀದಿಸಿರುವುದಾಗಿ ಕೆಲವು ವಿಮಾಸಂಸ್ಥೆಗಳು ತಿಳಿಸಿವೆ. ಬಿಎಸ್‌ಇ ಸೂಚ್ಯಂಕದ ಪ್ರಕಾರ ಜೂನ್ 30ರಂದು ವಿಮಾ ಸಂಸ್ಥೆಗಳು ಇನ್ಫೋಸಿಸ್‌ನಲ್ಲಿ ಶೇ.11.01ಪ್ರಮಾಣದ ಶೇರುಗಳನ್ನು ಹೊಂದಿವೆ. ವಿಮಾ ಸಂಸ್ಥೆಗಳು ಶೇ.15ರಷ್ಟು ಪ್ರಮಾಣದ ಶೇರುಗಳನ್ನು ಹೊಂದಿರಲು ಐಆರ್‌ಡಿಎಐ(ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ) ಅವಕಾಶ ನೀಡಿದೆ.
ಇನ್ಪೋಸಿಸ್ ಶೇರುದರ ಕುಸಿಯುತ್ತಿರುವುದರಿಂದ ನಮಗೆ ಹೂಡಿಕೆ ಮಾಡಲು ಒಳ್ಳೆಯ ಅವಕಾಶ ಸಿಕ್ಕಂತಾಗಿದೆ ಎಂದು ಖಾಸಗಿ ವಿಮಾ ಸಂಸ್ಥೆಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ವಿಮಾ ಸಂಸ್ಥೆಗಳಲ್ಲಿ ಬೃಹತ್ ಹೂಡಿಕೆದಾರ ಎನಿಸಿರುವ ಜೀವವಿಮಾ ನಿಗಮವು- ಶೇರುಗಳ ದರ ಕುಸಿದಾಗ ಖರೀದಿಸುವ, ಏರಿದಾಗ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದೆ. 2017ರ ಆರ್ಥಿಕ ವರ್ಷದಲ್ಲಿ ಎಲ್‌ಐಸಿ (ಜೀವವಿಮಾ ನಿಗಮ) ಸುಮಾರು 43,000 ಕೋಟಿ ರೂ.ಯನ್ನು ಶೇರುಮಾರುಕಟ್ಟೆಯಲ್ಲಿ ತೊಡಗಿಸಿದ್ದು ಇದರಲ್ಲಿ 16,000 ಕೋಟಿ ರೂ.ಯನ್ನು ಈ ವರ್ಷದ ಪ್ರಥಮ ತ್ರೈಮಾಸಿಕ ಅವಧಿಯಲ್ಲೇ ತೊಡಗಿಸಿದೆ. ಇನ್‌ಫೋಸಿಸ್ ಶೇರುಗಳ ದರ ಕುಸಿತದ ಲಾಭ ಪಡೆಯಲು ಎಲ್‌ಐಸಿ ಕೂಡಾ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಶೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಹಾಗೂ ಜನರಲ್ ಇನ್ಷೂರೆನ್ಸ್ ಸಂಸ್ಥೆಗಳು ‘ಬಲಿಷ್ಠ ಆಟಗಾರರು’ ಎನಿಸಿಕೊಂಡಿವೆ.







