ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಧರಣಿ

ಮಡಿಕೇರಿ, ಆ.2 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಜಿಲ್ಲಾ ಸಮಿತಿ ಸದಸ್ಯರಾದ ಅಮಿನ್ ಮೊಹಿಸಿನ್ ಮಾತನಾಡಿ, ಭೂಮಿ ವಂಚಿತರ ಹೋರಾಟ ಆರಂಭಗೊಂಡು ವರ್ಷ ಕಳೆದಿದೆ. ಸಮಸ್ಯೆಗಳು ಹಾಗೇ ಉಳಿದಿವೆ, ನಿವೇಶನಕ್ಕಾಗಿ, ತುಂಡು ಕೃಷಿ ಭೂಮಿಗಾಗಿ ಬಡವರು ಕಾಯುತ್ತಿದ್ದಾರೆ. ಹೀಗಾಗಿ ಮುಂದಿನ ಹಂತದ ಹೋರಾಟಕ್ಕೆ ರಾಜ್ಯದ ಬಡಜನರು ಮುಂದಾಗುವುದು ಅನಿವಾರ್ಯವಾಗಿದೆ ಎಂದರು.
ರಾಜ್ಯದಾದ್ಯಂತ ತಾಂಡವಾಡುತ್ತಿರುವ ಬಡವರ ಭೂಮಿ ಮತ್ತು ವಸತಿ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಸತತ ಮೂರು ಹಂತಗಳ ಚಳವಳಿ ನಡೆಸಲಾಗಿದೆ. ಆದರೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆತ್ತಿಲ್ಲ. ಪಟ್ಟಭದ್ರ ಹಿತಾಸಕ್ತಿಗಳ ವಿರೋಧ, ಜನಪ್ರತಿನಿಧಿಗಳ ಅಸಡ್ಡೆ ಹಾಗೂ ಅಧಿಕಾರಶಾಹಿಯ ಅಸಹಕಾರದಿಂದ ಸರಕಾರದ ಭರವಸೆ ಈಡೇರುತ್ತಿಲ್ಲ. ತಮ್ಮೆಲ್ಲಾ ಬೇಡಿಕೆಗಳಿಗೆ ಸರಕಾರ ಸಕಾಲದಲ್ಲಿ ಸ್ಪಂದಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಬೇಡಿಕೆಗಳು: ಗಿರಿಜನರಿಗೆ ಪುನರ್ ವಸತಿ ಕಲ್ಪಿಸಲಾಗಿರುವ ಕುಶಾಲನಗರ ಸಮೀಪದ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಪ್ರದೇಶಗಳಿಗೆ ಸಮರ್ಪಕ ಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕು, ಕೊಡಗು ಜಿಲ್ಲೆಯಾದ್ಯಂತ ಅಭಯಾರಣ್ಯ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಕುಟುಂಬಗಳಿಗೆ ಹಕ್ಕುಪತ್ರ ಮತ್ತು ಆರ್‍ಟಿಸಿ ನೀಡಬೇಕು, ಪ್ರೊ. ಮುಜಾಫರ್ ಆಯೋಗದ ವರದಿಯನ್ನು ತಕ್ಷಣ ಅನುಷ್ಠಾನಗೊಳಿಸಬೇಕು, ಅರಣ್ಯವಾಸಿಗಳ ಜನ್ಮಸಿದ್ಧ ಹಕ್ಕುಗಳನ್ನು ರಕ್ಷಿಸಬೇಕು, ಹಳ್ಳಿಗಟ್ಟಿನ ಲೈನ್ ಮನೆಯಿಂದ ಬಂದು ಗುಡಿಸಲು ಹಾಕಿಕೊಂಡಿರುವ 116 ಆದಿವಾಸಿ ಕುಟುಂಬಗಳಿಗೆ ತಕ್ಷಣ ಆರ್‍ಟಿಸಿ ನೀಡಬೇಕು, ವೀರಾಜಪೇಟೆಯ ನಾತಂಗಾಲದ 63 ಕುಟುಂಬಗಳಿಗೆ ತಲಾ 10 ಸೆಂಟ್ ನೀವೆಶನ ನೀಡಬೇಕು, ಬಾಳೆಗುಂಡಿ ಗಿರಿಜನ ಹಾಡಿಯಲ್ಲಿರುವ ಕುಟುಂಬಗಳಿಗೆ ಕಂದಾಯ ಕಾಯ್ದೆಯಡಿಯೇ ಹಕ್ಕುಪತ್ರ, ಆರ್‍ಟಿಸಿ ನೀಡಿ ಸಕ್ರಮಗೊಳಿಸಬೇಕು ಹಾಗೂ 94ಸಿ ಮತ್ತು 94 ಸಿಸಿ ಯಲ್ಲಿ ಅರ್ಜಿ ಸಲ್ಲಿಸಿದವರಿಗೆ ತಕ್ಷಣ ಹಕ್ಕುಪತ್ರ ವಿತರಿಸಬೇಕು ಇನ್ನಿತರ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಧರಣಿ ನಿರತರರು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಭೂಮಿ ಮತ್ತು ಹಕ್ಕು ವಂಚಿತರ ಹೋರಾಟ ಸಮಿತಿಯ ಅಧ್ಯಕ್ಷ ರಾಜುಭೀಮವರ, ಸಮಿತಿಯ ಸಂಚಾಲಕ ಡಿ.ಎಸ್.ನಿರ್ವಾಣಪ್ಪ, ಬಿಸ್ಪಿ ಕಾರ್ಯದರ್ಶಿ ಕೆ. ಮೊಣ್ಣಪ್ಪ, ಸಣ್ಣಪ್ಪ ಮತ್ತಿತರರು ಪಾಲ್ಗೊಂಡಿದ್ದರು.







