ಮೋಡ ಬಿತ್ತನೆಗೆ ಚಾಲನೆ: ‘ವರ್ಷಧಾರೆ’ ಮೋಡಬಿತ್ತನೆ ಯಶಸ್ವಿ

ಬೆಂಗಳೂರು,ಆ.21: ರಾಜ್ಯದ ಬರ ಪೀಡಿತ ಪ್ರದೇಶಗಳಲ್ಲಿ ಕೃತಕವಾಗಿ ಮಳೆ ಬರಿಸಲು ರಾಜ್ಯ ಸರಕಾರ ಕೈಗೊಂಡ ಮೋಡ ಬಿತ್ತನೆ ಯೋಜನೆಗೆ ಜಕ್ಕೂರು ವಿಮಾನಯಾನ ತರಬೇತಿ ಕೇಂದ್ರದಲ್ಲಿ ಇಂದು ವಿದ್ಯುಕ್ತವಾಗಿ ಚಾಲನೆ ದೊರೆಯಿತು. ವಿಮಾನಯಾನ ತರಬೇತಿ ಕೇಂದ್ರದಿಂದ ದಕ್ಷಿಣ ದಿಕ್ಕಿನ ಕಡೆ ಸುಮಾರು 60 ಕಿ.ಮೀ ದೂರ 50 ನಿಮಿಷಗಳ ಕಾಲ ಹಾರಾಟ ನಡೆಸಿದ ಎನ್267ಸಿಬಿ ವಿಮಾನವು ರಾಮನಗರ, ನೆಲಮಂಗಲ, ಆನೇಕಲ್ ಭಾಗಗಳಲ್ಲಿ ಯಶಸ್ವಿಯಾಗಿ ಮೋಡ ಬಿತ್ತನೆ ಮಾಡಿತು.
ಇದಕ್ಕೂ ಮೊದಲು ಮೋಡ ಬಿತ್ತನೆಯ ವಿಶೇಷ ವಿಮಾನ ಹಾರಾಟಕ್ಕೆ ಯಲಹಂಕದ ವಾಯು ನೆಲೆಯಲ್ಲಿ ವಾಯು ಸೇನೆಯ ವಿಮಾನಗಳು ಹಾರಾಟ ನಡೆಸುತ್ತಿದ್ದರಿಂದ ನಿಗದಿ ಪಡಿಸಿದ ಸಮಯಕ್ಕಿಂತ 90 ನಿಮಿಷಗಳ ತಡವಾಗಿ ಹಾರಾಟ ನಡೆಸಿತು.

ಪ್ರಾಯೋಗಿಕ ಮೋಡ ಬಿತ್ತನೆ ವಿಮಾನ ಹಾರಾಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್, ಕೃಷಿ ಸಚಿವ ಕೃಷ್ಣಬೈರೇಗೌಡ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಂ ಪ್ರಯಾಣಿಸಿದರು. ಮಂಗಳವಾರದಿಂದ ಅಧಿಕೃತವಾಗಿ ನಗರದ ಎಚ್‌ಎಎಲ್ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮೋಡ ಬಿತ್ತನೆಗಾಗಿ ವಿಶೇಷ ವಿಮಾನಗಳು ಹಾರಾಟ ನಡೆಸಲಿವೆ.
60 ದಿನಗಳ ಕಾಲ ಮೋಡ ಬಿತ್ತನೆ: ಮೋಡ ಬಿತ್ತನೆಗಾಗಿ ಯಾದಗಿರಿ ಜಿಲ್ಲೆಯ ಸುರಪೂರ, ಗದಗ, ಬೆಂಗಳೂರಿನಲ್ಲಿ ರಾಡಾರ್‌ಗಳನ್ನು ಸ್ಥಾಪಿಸಲಾಗಿದೆ. ಮೋಡ ಬಿತ್ತನೆ ಕಾರ್ಯಕ್ರಮವು 60 ದಿನಗಳ ಕಾಲ ನಡೆಯಲಿದ್ದು, ಪ್ರತಿದಿನ ವಿಮಾನ ಎರಡು ಗಂಟೆಗಳ ಕಾಲ ಹಾರಾಟ ನಡೆಸಲಿದೆ.
ವರ್ಷಧಾರೆ: ಸಾಲಿನ ಮೋಡ ಬಿತ್ತನೆಯ ಯೋಜನೆಗೆ ವರ್ಷಧಾರೆ ಎಂದು ಹೆಸರಿಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.

ಮೋಡ ಬಿತ್ತನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 2003 ರಲ್ಲಿ ದೇಶದಲ್ಲೇ ಪ್ರಥಮವಾಗಿ ಕರ್ನಾಟಕ ವರುಣಾ ಹೆಸರಿನಲ್ಲಿ ಮೋಡ ಬಿತ್ತನೆ ಕಾರ್ಯ ಮಾಡಿತ್ತು. ಬಹಳ ಜನ ಈ ಬಗ್ಗೆ ಅಧ್ಯಯನ ಮಾಡದೇ ಏನೇನೂ ಮಾತನಾಡುತ್ತಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಯಾದ ಮೇಲೆ ಇದರ ಪ್ರಯೋಜನ ಅರಿವಾಗಲಿದೆ ಎಂದರು.
ಯೂರೋಪ್, ಚೈನಾ, ಥಾಯ್‌ಲ್ಯಾಂಡ್ ಸೇರಿದಂತೆ 50ಕ್ಕೂ ಅಧಿಕ ರಾಷ್ಟ್ರಗಳು ಈಗಾಗಲೇ ಮೋಡ ಬಿತ್ತನೆ ಕಾರ್ಯವನ್ನು ಕೈಗೊಂಡು ಯಶಸ್ಸು ಕಂಡಿದ್ದಾರೆ. ಇಂತಹ ಕಾರ್ಯಕ್ರಮಕ್ಕೆ ದೇಶದಲ್ಲಿ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಕೈ ಹಾಕಲಾಗಿದೆ ಎಂದು ತಿಳಿಸಿದರು.
ಕೃಷಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಬರಗಾಲದಿಂದಾಗಿ ವರ್ಷಕ್ಕೆ 10 ರಿಂದ 15 ಸಾವಿರ ಕೋಟಿ ರೂ. ರಾಜ್ಯಕ್ಕೆ ನಷ್ಟವಾಗುತ್ತಿದೆ. ಬರ ನಿರ್ವಹಣೆಗಾಗಿ ಸರಕಾರ 6 ಸಾವಿರ ಕೋಟಿ ರೂ. ವ್ಯಹಿಸಲಾಗುತ್ತಿದೆ. ಮೋಡ ಬಿತ್ತನೆಯಿಂದ ಅನುಕೂಲವಾಗಲಿದೆ ಎಂದು ವೈಜ್ಞಾನಿಕ ಶಿಫಾರಸಿನ ಆಧಾರದ ಮೇಲೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಚಿವ ಎಂ.ಆರ್.ಸೀತಾರಾಂ, ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ನಾಗಾಂಬಿಕದೇವಿ ಸೇರಿದಂತೆ ಇತರರು ಇದ್ದರು.
ಸೂಕ್ತ ಸಮಯ ಪೂರಕ ತಂತ್ರಜ್ಞಾನವಿರುವ ಅತ್ಯಾಧುನಿಕ ತಂತ್ರಜ್ಞಾನದಿಂದ ಮೋಡ ಬಿತ್ತನೆ ಮಾಡಿದ ಎರಡು ಮೂರು ಗಂಟೆಗಳಲ್ಲಿ ಮಳೆ ಬರಲಿದೆ. ಮೋಡ ಬಿತ್ತನೆ ಮಾಡಿದ 150 ಕಿ. ಮೀ ವ್ಯಾಪ್ತಿಯಲ್ಲಿ ಇದರ ಪರಿಣಾಮವನ್ನು ಕಾಣಬಹುದು. ಇಂದಿನ ತಂತ್ರಜ್ಞಾನಕ್ಕಿಂತ ಶೇ.20ರಿಂದ 30ಕ್ಕಿಂತ ಹೆಚ್ಚು ಪರಿಣಾಮಕಾರಿ.
-ರಾಮ್ ಸಾಗರ್, ಮೋಡ ಬಿತ್ತನೆ ತಜ್ಞರ ಸಮಿತಿಯ ಮುಖ್ಯಸ್ಥ







