ರಾಜ್ಯ ಸರಕಾರದಿಂದ ಪೊಲೀಸ್ ವ್ಯವಸ್ಥೆ ದುರ್ಬಳಕೆ: ಬಿಜೆಪಿ ಆರೋಪ
ರಾಜ್ಯಪಾಲರಿಗೆ ಬಿಜೆಪಿ ನಿಯೋಗದಿಂದ ದೂರು ಸಲ್ಲಿಕೆ

ಬೆಂಗಳೂರು, ಆ.21: ರಾಜ್ಯ ಸರಕಾರವು ಬಿಜೆಪಿ ಮುಖಂಡರ ವಿರುದ್ಧ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅಲ್ಲದೆ, ರಾಜಕೀಯ ವಿರೋಧಿಗಳ ದೂರವಾಣಿ ಕರೆಗಳನ್ನು ಕದ್ದಾಲಿಸುತ್ತಿದೆ ಎಂದು ಬಿಜೆಪಿ ಮುಖಂಡರ ನಿಯೋಗವು ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.
ಸೋಮವಾರ ವಿಧಾನಸೌಧದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿಯಿಂದ ರಾಜಭವನದವರೆಗೆ ಪಾದಯಾತ್ರೆ ನಡೆಸಿದ ಕೇಂದ್ರ ಸಚಿವ ಅನಂತ್‌ಕುಮಾರ್ ನೇತೃತ್ವದ ಬಿಜೆಪಿ ಮುಖಂಡರ ನಿಯೋಗವು, ಆನಂತರ ರಾಜ್ಯಪಾಲ ವಜುಭಾಯಿವಾಲಾರನ್ನು ಭೇಟಿ ಮಾಡಿ ದೂರು ಸಲ್ಲಿಸಿತು.
ಕಾನೂನು ಬಾಹಿರವಾಗಿ ಬಿಜೆಪಿ ಮುಖಂಡರ ದೂರವಾಣಿಯನ್ನು ಕದ್ದಾಲಿಸಲಾಗುತ್ತಿದೆ. ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಸರಕಾರ ನಮಗೆ ಕಿರುಕುಳ ನೀಡುತ್ತಿದೆ. ಎಸಿಬಿ ಹಾಗೂ ಆರ್‌ಟಿಐ ಕಾರ್ಯಕರ್ತರನ್ನು ಮುಂದಿಟ್ಟುಕೊಂಡು ಸುಳ್ಳು ದೂರುಗಳನ್ನು ದಾಖಲಿಸಲಾಗುತ್ತಿದೆ. ಅಲ್ಲದೆ, ಆರೆಸ್ಸೆಸ್ ಕಾರ್ಯಕರ್ತರ ಕಗ್ಗೊಲೆ ನಡೆಸುತ್ತಿರುವ ಸಮಾಜ ವಿದ್ರೋಹಿ ಶಕ್ತಿಗಳನ್ನು ನಿಯಂತ್ರಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ನಿಯೋಗ ಆರೋಪಿಸಿದೆ.
ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯ, ಹಿರಿಯ ಪೊಲೀಸ್ ಅಧಿಕಾರಿ ಎಂ.ಎನ್.ರೆಡ್ಡಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಕದ್ದಾಲಿಕೆ ಮಾಡಿಸುತ್ತಿದ್ದಾರೆ. ಯಡಿಯೂರಪ್ಪ ವಿರುದ್ಧ ಸಿಎಜಿ ವರದಿಯನ್ನಾಧರಿಸಿ 16 ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ ಎಂದು ನಿಯೋಗ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧೀನದಲ್ಲಿರುವ ಎಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದುದರಿಂದ, ಈ ವಿಚಾರದಲ್ಲಿ ತಾವು ಮಧ್ಯಪ್ರವೇಶಿಸಿ, ಕೆಂಪಯ್ಯರನ್ನು ಕೂಡಲೆ ವಜಾಗೊಳಿಸುವುದು ಹಾಗೂ ಎಸಿಬಿ ಮುಖ್ಯಸ್ಥ ಎಂ.ಎನ್.ರೆಡ್ಡಿ ಹಾಗೂ ಡಿವೈಎಸ್ಪಿ ಬಾಲರಾಜ್, ಅಂಥೋಣಿ ಜಾನ್ ಹಾಗೂ ಸಿಪಿಐ ಮಂಜುನಾಥ್‌ರನ್ನು ಅಮಾನತ್ತುಗೊಳಿಸಬೇಕೆಂದು ನಿರ್ದೇಶನ ನೀಡುವಂತೆ ನಿಯೋಗ ಮನವಿ ಸಲ್ಲಿಸಿತು.
ನಿಯೋಗದಲ್ಲಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್‌ಜೋಶಿ, ಶಾಸಕರಾದ ಆರ್.ಅಶೋಕ್, ಸಿ.ಟಿ.ರವಿ, ಗೋವಿಂದಕಾರಜೋಳ, ಲಕ್ಷ್ಮಣ ಸವದಿ, ಎಸ್.ಸುರೇಶ್‌ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







