ಫ್ಲಾಟ್ ವಂಚನೆ ಪ್ರಕರಣ: ಬಂಧನ
ಬೆಂಗಳೂರು, ಆ.21: ಫ್ಲಾಟ್ ಕೊಡಿಸುವುದಾಗಿ ಹೇಳಿ ನಂಬಿಸಿ ನಕಲಿ ದಾಖಲೆಗಳನ್ನು ತೋರಿಸಿ ವಂಚನೆ ಮಾಡಿ ಪರಾರಿಯಾಗಿದ್ದ ಪ್ರಕರಣ ಸಂಬಂಧ ಆರೋಪಿಯೊಬ್ಬನನ್ನು ಇಲ್ಲಿನ ಸಂಜಯ್‌ನಗರ ಪೊಲೀಸರು ಬಂಧಿಸಿದ್ದಾರೆ.
ಆನಂದ ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದು, ನಕಲಿ ಬ್ಯಾಂಕ್‌ಖಾತೆ, ಪಾನ್‌ಕಾರ್ಡ್, ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿ ಅವುಗಳನ್ನು ತೋರಿಸಿ ಫ್ಲಾಟ್ ಕೊಡಿಸುವುದಾಗಿ ಹೇಳಿ ನೂರಾರು ಜನರನ್ನು ನಂಬಿಸಿದ್ದಾನೆ ಎಂದು ತಿಳಿದುಬಂದಿದೆ.
ವಂಚನೆ ಮೂಲಕ ಆರೋಪಿ ಒಟ್ಟು 1.5 ಕೋಟಿ ಸಂಗ್ರಹಿಸಿಕೊಂಡು ಪರಾರಿಯಾಗಿದ್ದನು. ಆನಂದ ಪರಾರಿಯಾಗಿರುವ ವಿಷಯ ಹಣ ಕೊಟ್ಟವರಿಗೆ ತಿಳಿದು ಈ ಸಂಬಂಧ ಆರೋಪಿಯ ವಿರುದ್ಧ ಸಂಜಯ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
Next Story





