Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಗೋಶಾಲೆಗಳೆಂಬ ಬರ್ಬರ ಕಸಾಯಿಖಾನೆಗಳು

ಗೋಶಾಲೆಗಳೆಂಬ ಬರ್ಬರ ಕಸಾಯಿಖಾನೆಗಳು

ವಾರ್ತಾಭಾರತಿವಾರ್ತಾಭಾರತಿ21 Aug 2017 11:45 PM IST
share
ಗೋಶಾಲೆಗಳೆಂಬ ಬರ್ಬರ ಕಸಾಯಿಖಾನೆಗಳು

 ಈ ಗೋಶಾಲೆಯೆನ್ನುವ ಕಲ್ಪನೆಯೇ ಅದೆಷ್ಟು ಅವಾಸ್ತವ ಮತ್ತು ಅವೈಜ್ಞಾನಿಕವಾದುದು ಎನ್ನುವುದನ್ನು ಛತ್ತೀಸ್‌ಗಡದ ಬಿಜೆಪಿ ಮುಖಂಡ ದೇಶಕ್ಕೆ ಸಾಬೀತು ಮಾಡಿದ್ದಾನೆ. ಹಾಲುಕೊಡದ ಗೋವುಗಳನ್ನು ಸಾಕುವುದಕ್ಕೆಂದು ಗೋಶಾಲೆಗಳನ್ನು ಸ್ಥಾಪಿಸಿ, ಸರಕಾರದಿಂದ ಸಕಲ ಸವಲತ್ತುಗಳನ್ನು ಪಡೆದು, ಗೋವುಗಳಿಗೆ ಹುಲ್ಲು, ನೀರು ಕೊಡದೆ ಬೃಹತ್ ಹತ್ಯಾಕಾಂಡವನ್ನೇ ನಡೆಸಿದ್ದಾರೆ. ಈತನ ಗೋಶಾಲೆಯಲ್ಲಿ ಸುಮಾರು 300ರಷ್ಟು ಗೋವುಗಳು ಹೃದಯವಿದ್ರಾವಕವಾಗಿ ಸಾವನ್ನಪ್ಪಿದ್ದು, ಇದೀಗ ಸರಕಾರ ಈತನನ್ನು ಬಂಧಿಸಿದೆ.

ಅಂದ ಹಾಗೆ ಈ ಗೋವುಗಳು ಈತನ ಸ್ವಂತದ್ದೇನೂ ಅಲ್ಲ. ಒಂದು ರೀತಿಯಲ್ಲಿ ರೈತರಿಗೆ ತಮ್ಮ ಹಸುಗಳನ್ನು ಮಾರಾಟ ಮಾಡಲು ಅವಕಾಶ ನೀಡದೆ ಅವರ ಕೈಯಿಂದ ಕಿತ್ತು ಈ ಗೋಶಾಲೆಗಳಲ್ಲಿ ಸಾಕಲಾಗುತ್ತಿತ್ತು. ಈ ಬಿಜೆಪಿ ಮುಖಂಡ ಅದಕ್ಕಾಗಿ ಸರಕಾರದಿಂದ ಆರ್ಥಿಕ ಸಹಾಯವನ್ನೂ ಪಡೆದುಕೊಳ್ಳುತ್ತಿದ್ದ. ಆದರೆ ಗೋವುಗಳು ಮಾತ್ರ ಅತ್ಯಂತ ಬರ್ಬರ ರೀತಿಯಲ್ಲಿ ಸತ್ತಿದ್ದು, ಇನ್ನಷ್ಟು ಗೋವುಗಳು ಈ ಗೋಶಾಲೆಗಳಲ್ಲಿ ಸಾವು ಬದುಕಿನ ನಡುವೆ ಒದ್ದಾಡುತ್ತಿವೆ. ಇದು ಬಹಿರಂಗವಾಗಿರುವ ಒಂದು ಪ್ರಕರಣ ಮಾತ್ರ. ಇಂದು ಗೋಶಾಲೆಯೆನ್ನುವುದು ನಕಲಿ ಗೋರಕ್ಷಕರ, ಕ್ರಿಮಿನಲ್‌ಗಳ, ರಾಜಕೀಯ ಮಧ್ಯವರ್ತಿಗಳ ಪಾಲಿಗೆ ಮೇಯುವ ಗೋಮಾಳವಾಗಿ ಪರಿವರ್ತನೆಯಾಗಿದೆ.

ರೈತ, ಕಷ್ಟಪಟ್ಟು ಸಾಕಿದ ಹಸುಗಳನ್ನು ಪುಕ್ಕಟೆಯಾಗಿ ತಮ್ಮ ಹಟ್ಟಿಗೆ ಸೇರಿಸಿಕೊಂಡು, ಸವಲತ್ತುಗಳನ್ನು ಪಡೆಯುವುದು, ಮಗದೊಂದೆಡೆ ಪ್ರಮುಖ ಅಧಿಕೃತ ಕಸಾಯಿಖಾನೆಗಳ ಜೊತೆಗೆ ಒಳಒಪ್ಪಂದ ಮಾಡಿಕೊಂಡು ಅವುಗಳನ್ನು ಹಂತಹಂತವಾಗಿ ಅಲ್ಲಿಗೆ ರವಾನಿಸುವುದು ಗೋಶಾಲೆ ಎನ್ನುವ ದಂಧೆಯ ಹಿಂದಿರುವ ಕರಾಳ ಮುಖವಾಗಿದೆ. ಆದುದರಿಂದಲೇ, ಈ ದೇಶದ ಕ್ರಿಮಿನಲ್‌ಗಳು, ಬೀದಿ ರೌಡಿಗಳು ಅತ್ಯುತ್ಸಾಹದಲ್ಲಿ ಗೋರಕ್ಷಕರಾಗಲು ಹೊರಟಿರುವುದು. ಈ ದೇಶದಲ್ಲಿ ಹಾಲು ಕೊಡುವ ಹಸುವನ್ನು ಸಾಕುವುದು ಎಷ್ಟು ಕಷ್ಟ ಎನ್ನುವುದು ಸಾಕುವ ರೈತನಿಗಷ್ಟೇ ಗೊತ್ತು. ಈ ದೇಶದ ಯಾವನೇ ರೈತ ಪೂಜಿಸುವುದಕ್ಕಾಗಿ ದನಗಳನ್ನು ಸಾಕಿದ ಉದಾಹರಣೆಗಳಿಲ್ಲ. ಈ ದೇಶದಲ್ಲಿ ದನವನ್ನು ಪೂಜಿಸುವ ಜನರು ದನ ಸಾಕಿದ ಉದಾಹರಣೆಯೂ ಇಲ್ಲ. ಶೂದ್ರವರ್ಗಕ್ಕೆ ಸೇರಿದ ರೈತರೇ ದೇಶದಲ್ಲಿ ಗೋಸಾಕಣೆಯಲ್ಲಿ ಅಗ್ರ ಸ್ಥಾನದಲ್ಲಿರುವವರು.

ಈ ಹಿಂದೆ ದನ ಸಾಕುವುದಕ್ಕಾಗಿಯೇ ಕೇಂದ್ರ ಸರಕಾರ ಸಾಲಮೇಳ ಮಾಡಿ ಸುದ್ದಿಯಾಗಿತ್ತು. ಗ್ರಾಮೀಣ ಪ್ರದೇಶದ ಜನರು ನಾಲ್ಕೈದು ದನಗಳನ್ನು ಸಾಕಿ ತಮ್ಮ ಬದುಕು ಕಟ್ಟಿ ಕೊಂಡ ಅದೆಷ್ಟೋ ಉದಾಹರಣೆಗಳಿವೆ. ದನ ಸಾಕಣೆ ಅವರ ಪಾಲಿಗೆ ಒಂದು ಉದ್ಯಮ. ಅದೊಂದು ಲಾಭದಾಯಕ ದಂಧೆ. ಹವ್ಯಾಸಿಯಾಗಿ ದನಸಾಕುವವರ ಒಂದು ವರ್ಗವೂ ಇದೆ. ಆದರೆ ವೃತ್ತಿಪರವಾಗಿ ದನ ಸಾಕುವವರಿಂದಲೇ ಈ ದೇಶದ ಹೈನುಗಾರಿಕೆ ಉಳಿದಿರುವುದು. ದನ ಸಾಕಣೆ ಉದ್ಯಮವಾಗಿರುವುದರಿಂದ, ಅದರಿಂದ ಬರುವ ಎಲ್ಲ ಉತ್ಪನ್ನಗಳ ಗ್ರಾಹಕರೂ ರೈತರಪಾಲಿಗೆ ಅತ್ಯಗತ್ಯವಾಗುತ್ತಾರೆ. ಹಾಲಿಗಾಗಿ ಮಾತ್ರ ದನ ಸಾಕುತ್ತಿದ್ದರೆ ಈ ದೇಶದಲ್ಲಿ ದನ ಸಾಕುವ ವೆಚ್ಚ ದುಬಾರಿಯಾಗಿ ಬಿಡುತ್ತಿತ್ತು. ಹಾಲಿನ ದರವೂ ಆ ಕಾರಣಕ್ಕಾಗಿ ಹೆಚ್ಚುತ್ತಿತ್ತು.

ದನದಿಂದ ಬರೇ ಹಾಲಷ್ಟೇ ಉತ್ಪಾದನೆಯಾಗುವುದಿಲ್ಲ. ಅದರ ಬೇರೆ ಬೇರೆ ಉತ್ಪನ್ನಗಳಿಗೆ ಬೇರೆ ಬೇರೆ ಬಗೆಯ ಗ್ರಾಹಕರಿರುವುದರಿಂದ ದನ ಸಾಕಣೆ ಹೆಚ್ಚು ಲಾಭದಾಯಕವಾಗಿರುವುದು. ಹಾಲು, ಬೆಣ್ಣೆ, ತುಪ್ಪದ ಗ್ರಾಹಕರು ಒಂದೆಡೆ. ಇದೇ ಸಂದರ್ಭದಲ್ಲಿ ದನದ ಸೆಗಣಿ, ಮೂತ್ರಗಳಿಂದಾಗುವ ಸಾವಯವ ಗೊಬ್ಬರದ ಗ್ರಾಹಕರು ಇನ್ನೊಂದೆಡೆ. ಹಾಗೆಯೇ ಅನುಪಯುಕ್ತ ಅಂದರೆ ಹಾಲು ಕೊಡದ ಗೊಡ್ಡು ಹಸು ಅಥವಾ ಎತ್ತುಗಳೂ ರೈತರಿಗೆ ನಷ್ಟವನ್ನುಂಟು ಮಾಡುವುದಿಲ್ಲ. ಯಾಕೆಂದರೆ ಈ ದೇಶದಲ್ಲಿ ಶೇ. 75ರಷ್ಟು ಗೋಮಾಂಸಾಹಾರಿಗಳಿದ್ದಾರೆ. ಆ ಗೋವನ್ನು ಅವರಿಗೆ ಮಾರಿದರೆ ಕನಿಷ್ಠ ಒಂದು ಗೋವಿಗೆ 10 ಸಾವಿರ ರೂಪಾಯಿವರೆಗೆ ರೈತರಿಗೆ ದಕ್ಕುತ್ತದೆ. ಈ ಹಣದಿಂದ ಉಳಿದ ಗೋವುಗಳಿಗೆ ಆಹಾರ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ತಮ್ಮ ವೈಯಕ್ತಿಕ ಇನ್ನಿತರ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಆದುದರಿಂದ ಗೋ ಮಾಂಸಾಹಾರಿಗಳು ಹೈನೋದ್ಯಮದ ಒಂದು ಪ್ರಮುಖ ಪಾಲುದಾರರು. ಅವರನ್ನು ಇದರಿಂದ ಬೇರ್ಪಡಿಸಿದರೆ, ಹೈನೋದ್ಯಮ ತನ್ನ ತಾಳ-ಮೇಳವನ್ನು ಕಳೆದುಕೊಳ್ಳುತ್ತದೆ.

ಇಷ್ಟೇ ಅಲ್ಲ. ಈ ದೇಶದಲ್ಲಿ ಸಾವಿರಾರು ಚರ್ಮದ ಕಾರ್ಖಾನೆಗಳು ಅಸ್ತಿತ್ವದಲ್ಲಿವೆ. ಇವರಿಗೆ ಬೇಕಾಗಿರುವ ಚರ್ಮಗಳೂ ಈ ಗೋವುಗಳಿಂದಲೇ ಸಿಗುತ್ತವೆ. ಈ ಚರ್ಮಗಳನ್ನು ಸಂಗ್ರಹಿಸಿ ಅವುಗಳನ್ನು ಕಾರ್ಖಾನೆಗಳಿಗೆ ಸಾಗಿಸುವ ಬಹುದೊಡ್ಡ ಉದ್ದಿಮೆಯೂ ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿವೆ. ನಾವು ಉಪಯೋಗಿಸುವ ಬಹುತೇಕ ಚೀಲ, ಬೆಲ್ಟ್ ಮೊದಲಾದವುಗಳು ಈ ಚರ್ಮಗಳಿಂದಲೇ ತಯಾರಾಗುತ್ತವೆ. ಭಾರತದಿಂದ ಭಾರೀ ಪ್ರಮಾಣದಲ್ಲಿ ಚರ್ಮದ ಉತ್ಪನ್ನಗಳು ರಫ್ತಾಗುತ್ತವೆ ಎನ್ನುವುದನ್ನೂ ಗಮನಿಸಬೇಕು. ಗೋವಿನ ಎಲುಬುಗಳಿಗೂ ಗ್ರಾಹಕರಿದ್ದಾರೆ. ಹೀಗೆ, ಇವೆಲ್ಲ ಒಂದಕ್ಕೊಂದು ಪೂರಕವಾಗಿ ಬೆಸೆದುಕೊಂಡರೆ ಮಾತ್ರ ಅದರಿಂದ ರೈತನಿಗೂ, ಸಮಾಜಕ್ಕೂ, ಸರಕಾರಕ್ಕೂ ಲಾಭ.

ತಲೆತಲಾಂತರಗಳಿಂದ ಈ ದೇಶದಲ್ಲಿ ಹೈನೋದ್ಯಮ ಉಳಿದು, ಬೆಳೆದು ಬಂದಿರುವುದು ಈ ಎಲ್ಲ ಘಟಕಗಳು ಪರಸ್ಪರ ಸರಪಣಿಯಂತೆ ಗಟ್ಟಿಯಾಗಿ ಬೆಸೆದುಕೊಂಡಿರುವುದರಿಂದ. ಯಾವಾಗ ಗೋವನ್ನು ಮಾತೆ, ದೇವರು ಎನ್ನುವ ನೆಪ ಹೊರಿಸಿ ಗೋಮಾಂಸಾಹಾರಿಗಳ ವಿರುದ್ಧ ಸರಕಾರ ಮುಗಿ ಬಿತ್ತೋ ಅಲ್ಲಿ ಈ ದೇಶದ ರೈತರು ತತ್ತರಿಸತೊಡಗಿದ್ದಾರೆ. ತಾವೇ ಸಾಕಿ ಬೆಳೆಸಿರುವ ಗೋವುಗಳನ್ನು ಮಾರಲಾಗದೆ, ಇನ್ನೊಂದು ಬಗೆಯ ನೋಟು ನಿಷೇಧದ ಆಘಾತವನ್ನು ಅವರು ಎದುರಿಸುವಂತಾಯಿತು. ಇರುವ ಎತ್ತುಗಳನ್ನು ಮಾರಲೂ ಸಾಧ್ಯವಿಲ್ಲ, ಮನೆಯಲ್ಲಿಟ್ಟು ಸಾಕುವುದಕ್ಕೂ ಸಾಧ್ಯವಿಲ್ಲ ಎನ್ನುವಂತಹ ಸ್ಥಿತಿ ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣವಾಗಿದೆ. ನಿಜವಾದ ಗೋರಕ್ಷಕರು ಅತಂತ್ರರಾದರು. ಇದೇ ಸಂದರ್ಭದಲ್ಲಿ ಬೀದಿಯಲ್ಲಿ ನಕಲಿ ಗೋರಕ್ಷಕರು ಹುಟ್ಟಿಕೊಂಡರು. ಗೋರಕ್ಷಣೆಯ ಹೆಸರಲ್ಲೇ ದಂಧೆಯನ್ನು ಶುರು ಹಚ್ಚಿದರು. ಅಷ್ಟೇ ಅಲ್ಲ, ವಿವಿಧ ನಾಯಕರು ಸರಕಾರದ ಹಣದಲ್ಲಿ ಗೋಶಾಲೆಗಳನ್ನು ನಿರ್ವಹಿಸತೊಡಗಿದರು.

ಹಾಲುಕೊಡುವ ಗೋವನ್ನೇ ಸಾಕುವುದು ಕಷ್ಟವಾಗಿರುವಾಗ, ಶೇ. 10ರಷ್ಟಿರುವ ಜನರ ವೈಯಕ್ತಿಕ ನಂಬಿಕೆಗಾಗಿ ಹಾಲು ಕೊಡದ ಅನುಪಯುಕ್ತವಾದ ಸಹಸ್ರಾರು ಗೋವುಗಳನ್ನು ಸರಕಾರದ ವೆಚ್ಚದಲ್ಲಿ ಸಾಕುವುದು ಅವಾಸ್ತವ ಮತ್ತು ಜನರ ಹಣದ ಪೋಲು ಕೂಡ. ಇದರಿಂದ ಸರಕಾರಕ್ಕಾಗಲಿ, ಸಮಾಜಕ್ಕಾಗಲಿ ಯಾವುದೇ ಲಾಭವಿಲ್ಲ ಮತ್ತು ಸ್ವತಃ ಗೋವುಗಳಿಗೂ ಇದರಿಂದ ಲಾಭವಿಲ್ಲ ಎನ್ನುವುದು ಛತ್ತೀಸ್‌ಗಡದ ಪ್ರಕರಣ ಹೇಳಿದೆ. ಕೆಲವೇ ಕೆಲವು ಮಧ್ಯವರ್ತಿಗಳು ಗೋವುಗಳ ಹೆಸರಲ್ಲಿ ಸರಕಾರದ ಹಣವನ್ನು ದೋಚುವುದಕ್ಕೆ ಈ ಗೋಶಾಲೆಗಳು ಅವಕಾಶ ಮಾಡಿಕೊಡುತ್ತಿವೆ. ಗೋವುಗಳನ್ನು ಯಾರು ದೇವರು, ತಾಯಿ ಎಂದು ನಂಬುತ್ತಿದ್ದಾರೆಯೋ ಅವರೇ, ಅನುಪಯುಕ್ತ ಗೋವುಗಳನ್ನು ಸ್ವಂತ ವೆಚ್ಚದಿಂದ ತಮ್ಮ ಹಟ್ಟಿಗಳಲ್ಲಿ ಸಾಕುವುದು ಸರಿಯಾದ ಕ್ರಮ. ಇಂದು ರಾಷ್ಟ್ರಮಟ್ಟದಲ್ಲಿ ಈ ಗೋಶಾಲೆಗಳಿಗಾಗಿ ಸರಕಾರ ಕೋಟ್ಯಂತರ ಹಣ ವ್ಯಯ ಮಾಡುತ್ತಿದೆ.

ಸರಕಾರ ತಕ್ಷಣ ಈ ಗೋಶಾಲೆಯೆಂಬ ಅವಾಸ್ತವವಾದ, ಅವೈಜ್ಞಾನಿಕವಾದ ಯೋಜನೆಯನ್ನು ಹಿಂದೆಗೆಯಬೇಕು. ಎಲ್ಲ ಗೋಶಾಲೆಗಳನ್ನು ಮುಚ್ಚಿಸಿ, ಅದಕ್ಕೆ ವ್ಯಯ ಮಾಡುತ್ತಿರುವ ಅಪಾರ ಪ್ರಮಾಣದ ಹಣವನ್ನು ಗೋರಖ್‌ಪುರದಂತಹ ಆಸ್ಪತ್ರೆಗಳ ಸುಧಾರಣೆಗೆ ಬಳಸಬೇಕು. ಸರಕಾರಿ ಶಾಲೆಗಳಲ್ಲಿರುವ ಮಕ್ಕಳ ಏಳಿಗೆಗೆ ಬಳಸಬೇಕು. ರೈತರ ಸೊತ್ತಾಗಿರುವ ಗೋವುಗಳನ್ನು ಸ್ವತಂತ್ರವಾಗಿ ಮಾರಾಟ ಮಾಡುವ ಹಕ್ಕು ರೈತರಿಗೆ ಮರಳಿಸಬೇಕು. ಇದರಿಂದ, ರೈತರಿಗೂ, ಸರಕಾರಕ್ಕೂ, ಸಮಾಜಕ್ಕೂ ಏಕಕಾಲದಲ್ಲಿ ಬಹಳಷ್ಟು ಲಾಭವಿದೆ. ಜೊತೆಗೆ ಗೋಮಾಂಸವನ್ನು ಸಾರ್ವತ್ರಿಕಗೊಳಿಸುವುದರಿಂದ ದೇಶದ ಬಡಜನರ ಅಪೌಷ್ಟಿಕತೆಯನ್ನು ನೀಗಿಸಲು ಸುಲಭ ದಾರಿಯೊಂದನ್ನು ತೆರೆದುಕೊಟ್ಟಂತಾಗುತ್ತದೆ. ಆದುದರಿಂದ, ಗೋಶಾಲೆ ಮುಚ್ಚಿ, ಗೋಮಾಂಸಾಹಾರಕ್ಕೆ ಸರಕಾರ ಪ್ರೋತ್ಸಾಹಿಸಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X