ರೈತರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಸರಕಾರಗಳು ವಿಫಲ: ಭೈರೇಗೌಡ
ರೈತಸಂಘದಂದಿ ಆ.28ಕ್ಕೆ ಪ್ರತಿಭಟನೆ

ಚಿಕ್ಕಬಳ್ಳಾಪುರ, ಆ.21: ಸತತ ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಒತ್ತಾಯಿಸಲು ಆ.28ರಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಜಿಲ್ಲೆಯ ರೈತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವುದಾಗಿ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ತಿಳಿಸಿದ್ದಾರೆ.
ನಗರದ ರೈತ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತಲೆದೂರಿರುವ ಭೀಕರ ಬರದಿಂದಾಗಿ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಯಂತಹ ಕೃತ್ಯಗಳತ್ತ ಸಾಗುತ್ತಿದ್ದರೂ, ಸರಕಾರಗಳು ಬರಮುಕ್ತ ಪ್ರದೇಶಗಳನ್ನಾಗಿ ರೂಪಿಸುವ ಶಾಶ್ವತ ಪರಿಹಾರಗಳನ್ನು ಕೈಗೊಳ್ಳದೇ ರೈತರನ್ನು ಕಡೆಗಣಿಸಿವೆ ಎಂದು ಕಿಡಿಕಾರಿದರು.
ಸಹಕಾರಿ ಬ್ಯಾಂಕ್‌ಗಳಲ್ಲಿನ ಕೇವಲ 50 ಸಾವಿರ ರೂ. ಸಾಲ ಮನ್ನಾ ಮಾಡಿದ ರಾಜ್ಯ ಸರಕಾರ ಉಳಿದ ಬ್ಯಾಂಕ್‌ಗಳಲ್ಲಿ ಸಾಲ ಮಾಡಿರುವ ರೈತರನ್ನು ಕಡೆಗಣಿಸಿದೆ. ಅಲ್ಲದೆ ರೈತರ ಸಾಲ ಮನ್ನಾ ಮಾಡಲು ಆಗುವುದಿಲ್ಲ ಎಂದಿದ್ದ ಕೇಂದ್ರ ಸರಕಾರ ಬೃಹತ್ ಉದ್ದಿಮೆದಾರರ 6 ಲಕ್ಷ ಕೋಟಿ ರೂ. ಮನ್ನಾ ಮಾಡುವ ಜೊತೆಗೆ ಕೆಲ ಉದ್ದಿಮೆದಾರರಿಗೆ ತೆರಿಗೆ ವಿನಾಯಿತಿ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ರೈತ ವಿರೋಧಿ ನಿಲುವುಗಳನ್ನು ಅನುಸರಿಸುತ್ತಿರುವ ಸರಕಾರಗಳ ಧೋರಣೆಯನ್ನು ಖಂಡಿಸಿ ರೈತ ಸಂಘದಿಂದ ರಾಜ್ಯಾದ್ಯಂತ ರೈತರ ಸಾಲ ಮನ್ನಾ ಮಾಡಲು ಅರ್ಜಿ ಸಲ್ಲಿಸುವ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಅಂತೆಯೇ ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಲ್ಲಿ ರೈತ ಸಂಘದ ನೇತೃತ್ವದಲ್ಲಿ ಆ.28ರಂದು ಪ್ರತಿಭಟನಾ ಮೆರವಣಿಗೆಯೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಸಾಲ ಮನ್ನಾ ಮಾಡಲು ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಸತ್ಯಪ್ಪ, ಎಸ್.ವಿ.ಲಕ್ಷ್ಮಣರೆಡ್ಡಿ, ಎಂ. ರಾಮಾಂಜಿನಪ್ಪ, ಶ್ರೀನಿವಾಸ್, ಗಂಗಾದರ್, ಈಶ್ವರಾಚಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







