ಆರು ತಿಂಗಳಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ ತಾರಾಲಯ: ಸಚಿವ ತನ್ವೀರ್ ಸೇಠ್

ಬೆಂಗಳೂರು, ಆ.23: ಮುಂದಿನ ಆರು ತಿಂಗಳಲ್ಲಿ ರಾಜ್ಯದ ಎಲ್ಲ ಸರಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಸಂಚಾರಿ ಡಿಜಿಟಲ್ ತಾರಾಲಯದ ಮೂಲಕ ಆಕಾಶಕಾಯಗಳನ್ನು ಪರಿಚಯಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ಬುಧವಾರ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಚಾರಿ ಡಿಜಿಟಲ್ ತಾರಾಲಯ ವಾಹನಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, 5 ಜಿಲ್ಲೆಗೆ ಒಂದು ಸಂಚಾರಿ ಡಿಜಿಟಲ್ ತಾರಾಲಯ ವಾಹನ ಪ್ರತಿ ಶಾಲೆಗೂ ಸಂಚರಿಸಲಿದೆ ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನದ ಮೂಲಕವೇ ಜಗತ್ತನ್ನು ನೋಡಲಾಗುತ್ತದೆ. ಆದರೆ, ನಮ್ಮ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಇದರಿಂದ ವಂಚಿತರಾಗಿದ್ದರು. ಹೀಗಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉತ್ಕೃಷ್ಟ ಸಂಶೋಧನೆಯಾದ ಆಕಾಶಕಾಯಗಳ ದರ್ಶನ, ಆಕಾಶದಲ್ಲಿ ಮಾನವ ನಿರ್ಮಿತ ಉಪಗ್ರಹಗಳ ಚಲನೆ ಸೇರಿದಂತೆ ವಿಜ್ಞಾನಕ್ಕೆ ಸಂಬಂಧಿಸಿದ ಕೌತುಕದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಶಾಲೆಯ ಅಂಗಳದಲ್ಲೇ ತಾರಾಲಯ ಎಂಬ ಕಾರ್ಯಕ್ರಮವನ್ನು ರೂಪಿಸಿದೆ ಎಂದರು.
ಇಲ್ಲಿಯವರೆಗೂ ಮಾಹಿತಿ ತಂತ್ರಜ್ಞಾನವು ಕೇವಲ ನಗರ ವಾಸಿಗಳಿಗೆ ಸೀಮಿತವಾಗಿತ್ತು. ಗ್ರಾಮಾಂತರ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನವು ಕೌತಕದ ವಿಷಯವಾಗಿದೆಯೇ ವಿನಃ ಆ ಕ್ಷೇತ್ರದಲ್ಲಿ ನಾವು ಭಾಗಿಗಳಾಗಬಹುದು ಎಂಬ ಭಾವನೆ ಇಲ್ಲಿಯವರೆಗೂ ಮೂಡಿಲ್ಲ. ಹೀಗಾಗಿ ಗ್ರಾಮಾಂತರ ವಿದ್ಯಾರ್ಥಿಗಳಿಗೆ ವಿಜ್ಞಾನ-ತಂತ್ರಜ್ಞಾನವನ್ನು ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ವಿವರಿಸಿದರು.
ಮಾಹಿತಿ ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಮ್ ಮಾತನಾಡಿ, ಆಕಾಶಕಾಯಗಳ ಕುರಿತು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಕುತೂಹಲ ಇರುವುದು ಸಹಜ. ಬೆಂಗಳೂರು ನಗರದ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಗರದಲ್ಲಿರುವ ತಾರಾಲಯಕ್ಕೆ ಭೇಟಿ ನೀಡಬಹುದು. ಆದರೆ, ಬೆಂಗಳೂರಿನ ಆಚೆಗಿರುವ ವಿದ್ಯಾರ್ಥಿಗಳು ಇದರಿಂದ ವಂಚಿತರಾಗುತ್ತಿದ್ದರು. ಹೀಗಾಗಿ ರಾಜ್ಯದ ಎಲ್ಲ ಶಾಲೆಯ ವಿದ್ಯಾರ್ಥಿಗಳಿಗೂ ಸಂಚಾರಿ ಡಿಜಿಟಲ್ ತಾರಾಲಯದ ಮೂಲಕ ಆಕಾಶಕಾಯಗಳನ್ನು ನೋಡುವಂತಹ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮುಂದಿನ ವಾರದಿಂದಲೇ ಸಂಚಾರಿ ಡಿಜಿಟಲ್ ತಾರಾಲಯ ವಾಹನಗಳು ಶಾಲೆಯಿಂದ ಶಾಲೆಗೆ ಸಂಚರಿಸಲಿವೆ. ಹೀಗಾಗಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯುವುದರ ಮೂಲಕ ವಿಜ್ಞಾನದ ಕುರಿತು ಮತ್ತಷ್ಟು ಆಸಕ್ತಿಯನ್ನು ಮೂಡಿಸಿಕೊಳ್ಳಬೇಕು ಎಂದು ಆಶಿಸಿದರು.
ಈ ವೇಳೆ ತಾರಾಲಯಕ್ಕೆ ಸಂಬಂಧಿಸಿದಂತೆ ಕೈಪಿಡಿ ಮತ್ತು ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದರಾಜ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಶೇಷ ನಿರ್ದೇಶಕ ಡಾ.ಎಚ್.ಹೊನ್ನೇಗೌಡ ಮತ್ತಿತರರಿದ್ದರು.







