ಯುವ ಜನತೆ ಮಾದಕ ವಸ್ತುಗಳಿಂದ ದೂರವಿರಬೇಕು: ನಿರಂಜನ್ ಕುಮಾರ್

ಚಿಕ್ಕಮಗಳೂರು, ಆ.23: ಯುವ ಜನತೆ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ನಗರ ವೃತ್ತ ನಿರೀಕ್ಷಕ ನಿರಂಜನ್ ಕುಮಾರ್ ಸಲಹೆ ಮಾಡಿದರು.
ಅವರು ಬುಧವಾರ ನಗರದ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಘಟಕ ಮತ್ತು ವಿದ್ಯಾರ್ಥಿ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಬಹಳಷ್ಟು ಆಕರ್ಷಣೆಗಳಿರುತ್ತವೆ. ಅವುಗಳಿಗೆ ಆಕರ್ಷಿತರಾದರೆ ವಿದ್ಯಾರ್ಥಿ ಜೀವನ ಹಾಳಾಗುತ್ತದೆ. ದುಶ್ಚಟಗಳು ಮತ್ತು ಮಾದಕ ವಸ್ತುಗಳಿಗೆ ದಾಸರಾದರೆ ಸಮಾಜ ಘಾತುಕರಾಗಿ ಬಾಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ದೇಶದಲ್ಲಿ ಇಂದು ಅಪರಾಧಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ವಿದ್ಯಾವಂತ ಯುವ ಜನರೇ ಅಪರಾಧಿಗಳಾಗುತ್ತಿರುವುದು ಸಮಾಜ ದ್ರೋಹಿ ಚಟುವಟಿಕೆಗಳಲ್ಲಿ ತೊಡಗುತ್ತಿರುವುದು ಹೆಚ್ಚುತ್ತಿದೆ, ಇದಕ್ಕೆ ಮೂಲ ಕಾರಣ ಮಾದಕ ವಸ್ತುಗಳ ದಾಸರಾಗಿರುವುದು ಎಂದು ಹೇಳಿದರು.
ಐ.ಡಿ.ಎಸ್.ಜಿ. ಕಾಲೇಜಿನ ಪ್ರಾಂಶುಪಾಲ ಟಿ.ಸಿ.ಬಸವರಾಜು ಮಾತನಾಡಿ, ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳು ಉಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು ಎಂದು ಕಿವಿ ಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ವಿನ್ಸೆಂಟ್ ಕಾರ್ಡೋಜಾ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಸಂಘಗಳನ್ನು ರಚಿಸಲಾಗಿದೆ ಎಂದರು.
ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳಿಗೆ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಉಪನ್ಯಾಸಕ ಜಗದೀಶ್, ಗಾಯಕ ಸಾಯಿ ಸತೀಶ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಸೈಯದ್ ನಗ್ಮಾ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕರಾದ ಎಂ.ಎ. ವಿನಯ್ ಕುಮಾರ್ ಸ್ವಾಗತಿಸಿದರು, ಜೆನ್ನಿಫರ್ ಡಿಸೋಜ ವಂದಿಸಿದರು.







