ಆಡಳಿತದ ಮಾದರಿ ಪ್ರಧಾನಿ ಮೋದಿಗೆ ತೋರಿಸುತ್ತೇನೆ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಆ.23: ರಾಜ್ಯದ ಮತದಾರರು ಒಂದು ಬಾರಿ ಜೆಡಿಎಸ್‌ಗೆ ಬಹುಮತ ಕೊಟ್ಟು ನೋಡಲಿ, ಹೇಗೆ ಆಡಳಿತ ಮಾಡಬೇಕೆಂದು ಪ್ರಧಾನಿ ನರೇಂದ್ರಮೋದಿಗೂ ತೋರಿಸಿಕೊಡುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬುಧವಾರ ಜೆ.ಪಿ.ನಗರದಲ್ಲಿ ತಮ್ಮ ನವೀಕೃತ ನಿವಾಸದ ಗೃಹ ಪ್ರವೇಶದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 60ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಎರಡು ಪಕ್ಷಗಳ ನಾಯಕರು ನಮ್ಮ ಬೆಂಬಲವನ್ನು ಈಗಿನಿಂದಲೇ ಯಾಚಿಸುತ್ತಿದ್ದಾರೆ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದ ಮೊದಲ ದಿನವೇ ಇಸ್ರೇಲ್ ಮಾದರಿ ಕೃಷಿಗೆ ಒತ್ತು ನೀಡಲಾಗುವುದು. ಇಸ್ರೇಲ್‌ನಿಂದ ಪರಿಣಿತರ ತಂಡವನ್ನು ಇಲ್ಲಿಗೆ ಕರೆಯಿಸಿ, ಅಲ್ಲಿನ ಮಾದರಿಯನ್ನು ನಮ್ಮ ರಾಜ್ಯದಲ್ಲೂ ಅಳವಡಿಸುತ್ತೇನೆ. ಈ ಬಾರಿ ಅಭಿವೃದ್ಧಿ ಕಾರ್ಯಸೂಚಿಯ ಮೇಲೆ ಚುನಾವಣೆ ಎದುರಿಸುತ್ತೇನೆ. ಯಾರ ವಿರುದ್ಧವೂ ಆರೋಪಗಳನ್ನು ಮಾಡುವುದಿಲ್ಲ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ, ಬಸವರಾಜ್ ಜೊತೆ ನಾನು ಇಸ್ರೇಲ್‌ಗೆ ಹೋಗುತ್ತಿದ್ದೇನೆ. ಆಗಸ್ಟ್ 26 ರಿಂದ ಒಂದು ವಾರಗಳ ಕಾಲ ಇಸ್ರೇಲ್ ಪ್ರವಾಸ ಕೈಗೊಂಡು, ಅಲ್ಲಿನ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ಕಲೆ ಹಾಕುತ್ತೇನೆ ಎಂದರು.
'ಸಿ' ಓಟರ್ ಸಮೀಕ್ಷೆ ಬಗ್ಗೆ ವ್ಯಂಗ್ಯ: ಈ ಬಾರಿ ನಾನು ಯಾಮಾರಬಾರದು ಅಂತಾ ಖಾಸಗಿ ಸಮೀಕ್ಷೆ ಮಾಡಿಸಿದ್ದೇನೆ. ಗುಪ್ತಚರ ಇಲಾಖೆ ವರದಿ ಬಗ್ಗೆಯೂ ಮಾಹಿತಿಯಿದೆ. ಸಿ ಫೋರ್ ಸಂಸ್ಥೆಗೂ ಕಾಂಗ್ರೆಸ್‌ಗೂ ಸಂಬಂಧ ಇಲ್ಲ ಅಂತ ಮುಖ್ಯಮಂತ್ರಿ ಹೇಳಿದರು. ಆದರೆ, ಸಿಫೋರ್ ಸಂಸ್ಥೆಯ ಮುಖ್ಯಸ್ಥ ಪ್ರೇಮ್‌ಚಂದ್ ಪಲೇಟಿ ಸರಕಾರ ರಚಿಸಿರುವ ವಿಷನ್ ಗ್ರೂಪ್‌ನ ಸದಸ್ಯರಾಗಿದ್ದಾರೆ ಎಂದು ಅವರು ಹೇಳಿದರು.
ಇಂತಹವರು ಮುಖ್ಯಮಂತ್ರಿ ಪರವಾಗಿ ಸಮೀಕ್ಷೆ ಕೊಡದೆ ಇನ್ನೇನು ಮಾಡುತ್ತಾರೆ. ಕಾಂಗ್ರೆಸ್‌ಗೆ 132 ಸ್ಥಾನಗಳಲ್ಲ 225 ಸ್ಥಾನಗಳು ಬರುತ್ತವೆ ಎಂದು ಹೇಳಿದರೂ ಅಚ್ಚರಿ ಇಲ್ಲ. ಸಿ ಫೋರ್ ಸಮೀಕ್ಷೆ ಉಲ್ಟಾ ಆಗುತ್ತದೆ. ಕಾಂಗ್ರೆಸ್‌ಗೆ 25-30 ಸ್ಥಾನ ಬರುತ್ತೆ. ಬಿಜೆಪಿಗಿಂತ 10-15 ಸ್ಥಾನ ಮುಂದಿರುತ್ತೇವೆ. ಕೇಂದ್ರ ಹಾಗೂ ರಾಜ್ಯ ಗುಪ್ತದಳದ ಮಾಹಿತಿ ಪ್ರಕಾರ ಜೆಡಿಎಸ್ ಮೊದಲ ಸ್ಥಾನದಲ್ಲಿದೆ. ಮಿಷನ್ 113 ನನ್ನ ಗುರಿ ಎಂದು ವಿವರಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನು ಢೋಂಗಿ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಅವರಿಗಿಂತ ದೊಡ್ಡ ಢೋಂಗಿ ಸಿದ್ದರಾಮಯ್ಯ. ರೈತರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ, ಈವರೆಗೆ ಒಂದು ಪೈಸೆಯೂ ಬಿಡುಗಡೆ ಮಾಡಿಲ್ಲ. ಸಾಲಮನ್ನಾ ಘೋಷಣೆ ಬಳಿಕವು 200 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಬಿಜೆಪಿ ಸರಕಾರದ ಅಕ್ರಮಗಳನ್ನು ನಾನು ಬಯಲಿಗೆಳೆದಿದ್ದರಿಂದ ಯಡಿಯೂರಪ್ಪ ನನ್ನ ಮೇಲೆ ಜಂತಕಲ್ ಗಣಿಯ ಗದಾಪ್ರಾಹಾರ ಆರಂಭಿಸಿದರು. ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಯಾವ ದಾಖಲೆ ಬಿಡುಗಡೆ ಮಾಡಿದ್ದಾರೆ. ಬಳ್ಳಾರಿಗೆ ಡ್ಯಾನ್ಸ್ ಮಾಡುತ್ತಾ ಹೋಗಿದ್ದು ಬಿಟ್ಟರೆ, ಮತ್ತೇನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಅರ್ಕಾವತಿ ಬಡಾವಣೆಯ 400 ಎಕರೆ ಡಿನೋಟಿಫೈ ಮಾಡಿದ ಒಂದು ಪ್ರಕರಣ ಸಾಕು ಮುಖ್ಯಮಂತ್ರಿಯ ಹಗರಣ ತೋರಿಸೋಕೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಹಕ್ಕು ಮುಖ್ಯಮಂತ್ರಿಗಿಲ್ಲ. ಅವರು ಗಾಜಿನ ಮನೆಯಲ್ಲಿ ಕೂತಿರುವುದನ್ನು ಮರೆಯಬಾರದು. ವಿಪಕ್ಷಗಳನ್ನು ಕೆಣಕಬೇಡಿ. ಕೋಲಾರದಲ್ಲಿ 33 ನವಜಾತ ಶಿಶುಗಳು ಮೃತಪಟ್ಟಿವೆ. ಅಪೌಷ್ಟಿಕತೆ ಸೇರಿದಂತೆ ಸಾವಿಗೆ ಹಲವು ಕಾರಣಗಳನ್ನು ವೈದ್ಯರು ನೀಡಿದ್ದಾರೆ. ಹಾಗಾದರೆ, ಅನ್ನಭಾಗ್ಯ ಯೋಜನೆ ಏನು ಪ್ರಯೋಜನವಾಯಿತು. ರಾಯಚೂರಿನಲ್ಲಿ ಇಂಥ ಪರಿಸ್ಥಿತಿ ಇತ್ತು. ಈಗ ಕೋಲಾರಕ್ಕೂ ಬಂದಿದೆ ಎಂದು ತಿಳಿಸಿದರು.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಬಗ್ಗೆ ಸಿಐಡಿ ವರದಿ ಏನಾಗಿದೆ. ಪ್ರಾಮಾಣಿಕ ವರದಿ ಕೊಟ್ಟಿದ್ದಾರಾ ಅಥವಾ ಸರಕಾರದ ಮೂಗಿನ ನೇರಕ್ಕೆ ವರದಿ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ನನ್ನ ಬಳಿಯೂ ನಿಮ್ಮ ಅಕ್ರಮಗಳ ಬಗ್ಗೆ ದಾಖಲೆಗಳಿವೆ ಸಿದ್ಧವಾಗಿರಿ ಎಂದು ಪರೋಕ್ಷವಾಗಿ ಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿದರು.







