ನಿಮ್ಮ ಮಕ್ಕಳು ವಿಶೇಷ ಸಾಧಕರಾಗಬೇಕೆ ? ಎಂಬ ಒಕ್ಕಣೆಯ ಜಾಹೀರಾತಿಗೆ ಮರುಳಾಗುವ ಮುನ್ನ ಇದನ್ನು ಓದಿ
ಪೋಷಕರೇ ಎಚ್ಚರ!

ಮಂಗಳೂರು, ಆ.23: ನಿಮ್ಮ ಮಗು ಇತರರಿಂದ ಭಿನ್ನ ಮತ್ತು ವಿಶಿಷ್ಟ ವ್ಯಕ್ತಿಯಾಗಬೇಕೇ ಎಂಬ ಒಕ್ಕಣೆಯೊಂದಿಗೆ ಮಕ್ಕಳನ್ನು ಶೋಷಣೆಗೊಳಿಸುವ ಜಾಲವೊಂದು ಮತ್ತೆ ಸಕ್ರಿಯವಾಗಿದ್ದು, ಇದರ ಬಗ್ಗೆ ಪೋಷಕರು ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದು ರಾಷ್ಟ್ರೀಯ ವಿಚಾರವಾದಿಗಳ ಸಂಘಟನೆಯ ಅಧ್ಯಕ್ಷರಾಗಿರುವ ಪ್ರೊ. ನರೇಂದ್ರ ನಾಯಕ್ ಸಲಹೆ ನೀಡಿದ್ದಾರೆ.
ಪುತ್ತೂರಿನಲ್ಲಿ ಇತ್ತೀಚೆಗೆ ಸಂಸ್ಥೆಯೊಂದು ಮಕ್ಕಳನ್ನು ಜಗತ್ತಿನ ಶ್ರೇಷ್ಠ ವ್ಯಕ್ತಿಗಳನ್ನಾಗಿ ನೋಡಬಯಸುತ್ತೀರಾ ಎಂಬ ಒಕ್ಕಣೆಯೊಂದಿಗೆ ಮಕ್ಕಳು ಕಣ್ಣಿಗೆ ಪಟ್ಟಿ ಧರಿಸಿ ಏನನ್ನೂ ಮಾಡಬಲ್ಲರು ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದು ಮೋಸದ ಜಾಲವಾಗಿದ್ದು, ಈ ಮೂಲಕ ಮಕ್ಕಳ ಶೋಷಣೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ, ಈಗಾಗಲೇ ಜಾಹೀರಾತು ಸ್ಥಾಯಿ ಸಮಿತಿಗೆ ದೂರು ನೀಡಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಇಲಾಖೆಗೆ ದೂರು ನೀಡುತ್ತಿರುವುದಾಗಿ ಪ್ರೊ. ನರೇಂದ್ರ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
'ಮಿಡ್ ಬ್ರೈನ್ ಆ್ಯಕ್ಟಿವೇಶನ್ (ಮಧ್ಯ ಮೆದಳನ್ನು ಸಕ್ರಿಯಗೊಳಿಸುವುದು) ಎಂಬ ಹೆಸರಿನಲ್ಲಿ ಎರಡು ವರ್ಷಗಳ ಹಿಂದೆ ದೇಶಾದ್ಯಂತ ಮೋಸದ ಜಾಲ ವೊಂದು ಸಕ್ರಿಯವಾಗಿತ್ತು. ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿದರೂ ಪುಸ್ತಕವನ್ನು ಓದಬಲ್ಲರು ಎಂಬುದಾಗಿ ಪೋಷಕರನ್ನು ನಂಬಿಸಿ ಮಕ್ಕಳನ್ನು ತಮ್ಮ ಮೋಸದ ಪ್ರಯೋಗಕ್ಕೆ ಗುರಿಯಾಗಿಸಿ ಶೋಷಣೆಯಾಗಿಸುತ್ತಿದ್ದ ಜಾಲವನ್ನು ರಾಷ್ಟ್ರ ಮಟ್ಟದಲ್ಲಿ ಇದೇ ವಿಚಾರವಾದಿಗಳ ಸಂಘಟನೆ ಬೇಧಿಸಿತ್ತು. ಆ ಬಳಿಕ ಕೆಲ ಸಮಯದಿಂದ ಕಣ್ಮರೆಯಾಗಿದ್ದ ಮೋಸದ ಜಾಲ ಇದೀಗ ಹೊಸ ಹೆಸರಿನಲ್ಲಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮತ್ತೆ ತಲೆ ಎತ್ತಿದೆ.
ನಿಮ್ಮ ಮಕ್ಕಳಲ್ಲಿನ ನಿಷ್ಕ್ರಿಯವಾಗಿರುವ ಮಧ್ಯದ ಮೆದುಳನ್ನು ಜಾಗೃತಗೊಳಿಸಿ ಅತಿ ಕ್ರಿಯಾಶೀಲ ಹಾಗೂ ಅತೀಂದ್ರಿಯ ಶಕ್ತಿ ಹೊಂದುವವರನ್ನಾಗಿ ಮಾಡುತ್ತೇವೆ. ಇದರಿಂದ ಸ್ಮರಣ ಶಕ್ತಿ, ಏಕಾಗ್ರತೆ, ಆತ್ಮಸ್ಥೈರ್ಯ ಬೆಳೆಸಲಾಗುತ್ತದೆ. ಪರೀಕ್ಷಾ ಭಯ ಹೋಗಲಾಡಿಸಿ ಆತ್ಮವಿಶ್ವಾಸ ತುಂಬಲಾಗುತ್ತದೆ. ಸಂಕೋಚ, ಏಕಾಂಗಿತನ, ಅತಿಯಾದ ಭಾವುಕತೆ, ಮಾನಸಿಕ ಒತ್ತಡಗಳನ್ನು ಹೋಗಲಾಡಿಸುವುದಾಗಿ ಸಂಸ್ಥೆಯೊಂದು ಪ್ರವೇಶಾತಿ ತೆರೆದಿದೆ ಎಂದು ಜಾಹೀರಾತು ಪ್ರಕಟಿಸಿದೆ.
ಮನೋ ವಿಜ್ಞಾನ, ಮನೋವೈದ್ಯಶಾಸ್ತ್ರ ಹಾಗೂ ಶಿಕ್ಷಣ ತಜ್ಞರು ಬುದ್ದಿಮತ್ತೆಯನ್ನು ಅಥವಾ ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಯಾವುದೇ ವಿಧಾನಗಳಿಲ್ಲ ಎಂದು ಒಪ್ಪಿಕೊಂಡಿದ್ದರೂ, ಹಣ ಮಾಡುವ ಉದ್ದೇಶದೊಂದಿಗೆ ಹೊಸ ಹೊಸ ವಿಧಾನಗಳೊಂದಿಗೆ ಮೋಸದ ಜಾಲವು ಹೊಸ ರೂಪದಲ್ಲಿ ಹುಟ್ಟಿಕೊಂಡಿದೆ. ಈ ಬಗ್ಗೆ ಪೋಷಕರು ಹಾಗೂ ಜನಸಾಮಾನ್ಯರು ಗಮನ ಹರಿಸಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕಣ್ಣಿಗೆ ಬಟ್ಟೆ ಕಟ್ಟಿ ಇಡೀ ಪುಸ್ತಕವನ್ನು ಓದುವುದೆಂದರೆ ಅದು ಸಾಧ್ಯವೇ? ಇದು ಜಾದೂಗಾರರು ನಡೆಸುವ ತಂತ್ರವಷ್ಟೇ. ಈ ಬಗ್ಗೆ ನಾನು ಸೇರಿದಂತೆ ಸಂಘಟನೆಯು ಹಲವಾರು ಕಡೆಗಳಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ಇದರ ಹಿಂದಿರುವ ರಹಸ್ಯವನ್ನು ಬಯಲುಗೊಳಿಸಿದ್ದೇವೆ. ಜಾದೂಗಾರರು ಈ ತಂತ್ರವನ್ನು ಬಳಸುತ್ತಾರೆ. ಅದನ್ನೇ ಮಕ್ಕಳ ಮೇಲೆ ಒತ್ತಡದ ರೂಪದಲ್ಲಿ ಸುಳ್ಳು ಹೇಳಿಸುವ ಮೂಲಕ ಹೇರಲಾಗುತ್ತದೆ. ಈ ರೀತಿಯಲ್ಲಿ ಮಕ್ಕಳಿಗೆ ಸುಳ್ಳು ಹೇಳಲು ಪ್ರೇರೇಪಿಸುವ ಮತ್ತು ಮಕ್ಕಳ ಮೇಲೆ ಒತ್ತಡ ಹೇರುವ ಈ ಕ್ರಿಯೆಗಳು ಅಪಾಯಕಾರಿ ಎಂದು ನರೇಂದ್ರ ನಾಯಕ್ ಎಚ್ಚರಿಸಿದ್ದಾರೆ.
ಇದು ಮೂರ್ಖತನದ ಪರಮಾವಧಿ: ಡಾ. ಕೆ.ಎಸ್. ಮಾಧವ ರಾವ್
'ಮಧ್ಯ ಮೆದುಳು ಮನುಷ್ಯ ಸೇರಿದಂತೆ ಬಹುತೇಕ ಜೀವಜಂತುಗಳಲ್ಲಿಯೂ ಸಾಮಾನ್ಯ. ಆದರೆ ಅದನ್ನು ಉತ್ತೇಜಿಸಲಾಗುವುದು ಎಂಬುದು ಮೂರ್ಖತನದ ಪರಮಾವಧಿ. ಕಲಿಕೆ ಎನ್ನುವುದು ನಿರಂತರವಾಗಿ ನಡೆಯಬೇಕಾದ ಪ್ರಕ್ರಿಯೆ. ಆದರೆ ಕಣ್ಣಿಗೆ ಬಟ್ಟೆ ಕಟ್ಟಿ ಓದುವುದು, ಬರೆಯಲಾಗುತ್ತದೆ ಎಂಬ ಪ್ರಕ್ರಿಯೆ ಮೋಸದಾಟ. ಕಣ್ಣಿನ ಅಕ್ಷಿಪಟಲದ ಮೇಲೆ ಸೂರ್ಯನ ಕಿರಣಗಳು ಬೀಳದಿದ್ದರೆ ಕಣ್ಣಿಗೆ ಏನೂ ಕಾಣಿಸಿಕೊಳ್ಳುವುದು ಅಸಾಧ್ಯ. ಈ ರೀತಿ ಕಣ್ಣಿಗೆ ಬಟ್ಟೆ ಕಟ್ಟಿ ಮೂಗಿನ ಅಥವಾ ಕಣ್ಣಿನ ನೇರಕ್ಕೆ ಪುಸ್ತಕ ಹಿಡಿದು ಮಕ್ಕಳನ್ನು ಓದಲು ಉತ್ತೇಜಿಸುವ ಪ್ರಕ್ರಿಯೆ ಕೇವಲ ಒಂದು ಟ್ರಿಕ್ಸ್ ಅಷ್ಟೆ'
- ಡಾ. ಕೆ.ಎಸ್. ಮಾಧವ ರಾವ್, ಹಿರಿಯ ಮನೋವೈದ್ಯರು ಹಾಗೂ ಅಧ್ಯಕ್ಷರು , ದ.ಕ. ಜಿಲ್ಲಾ ವಿಚಾರವಾದಿಗಳ ಸಂಘಟನೆ.







