ಗೋರಕ್ಷಣೆಯ ಹೆಸರಲ್ಲಿ ಸರಕಾರದ ಹಣ ದುರುಪಯೋಗ: ಮಾಯಾವತಿ ಆರೋಪ

ಲಕ್ನೊ, ಆ.23: ಬಿಜೆಪಿ ಆಡಳಿತದ ರಾಜ್ಯಗಳಾದ ರಾಜಸ್ತಾನ ಮತ್ತು ಛತ್ತೀಸ್‌ಗಢದಲ್ಲಿ ಸರಕಾರಿ ಅನುದಾನಿತ ಗೋಶಾಲೆಗಳಲ್ಲಿ ಹಸುಗಳು ಸಾವನ್ನಪ್ಪಿರುವ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಟೀಕಿಸಿರುವ ಬಿಎಸ್ಪಿ ನಾಯಕಿ ಮಾಯಾವತಿ, ಗೋರಕ್ಷಣೆಯ ಹೆಸರಲ್ಲಿ ಸರಕಾರದ ಖಜಾನೆಯನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಸರಕಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ರಾಮ ಮಂದಿರದಂತೆಯೇ ‘ಗೋಮಾತೆ’ಯನ್ನೂ ರಾಜಕೀಯ, ಕೋಮುವಾರು ಹಾಗೂ ಜಾತೀಯ ವಿಷಯವನ್ನಾಗಿ ಮಾಡಿದ್ದಾರೆ. ಆದರೆ ‘ಗೋ ಸೇವೆ’ಯ ಹೆಸರಲ್ಲಿ ಕ್ರೌರ್ಯ ನಡೆಯುತ್ತಿರುವುದು ಸರಿಯಲ್ಲ ಎಂದು ಮಾಯಾವತಿ ಹೇಳಿದ್ದಾರೆ.
ಬಿಜೆಪಿ ಆಡಳಿತಾವಧಿಯಲ್ಲಿ ಪರಿಸ್ಥಿತಿ ಎಷ್ಟೊಂದು ಹದಗೆಟ್ಟಿದೆ ಎಂದರೆ ಇಲ್ಲಿ ಮಾನವನ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಈಗ ವ್ಯಾಪಕ ಭ್ರಷ್ಟಾಚಾರದ ಕಾರಣ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸರಕಾರಿ ಅನುದಾನಿತ ಗೋಶಾಲೆಗಳಲ್ಲಿ ದನಗಳೂ ಸಾಯುತ್ತಿವೆ ಎಂದು ದೂರಿದ ಅವರು, ಹಸುಗಳ ಸಾವಿನ ಬಗ್ಗೆ ರಾಜ್ಯ ಸರಕಾರಗಳನ್ನು ಆರೆಸ್ಸೆಸ್ ಯಾಕೆ ಪ್ರಶ್ನಿಸುತ್ತಿಲ್ಲ ಎಂದು ಕೇಳಿದರು. ಗೋರಕ್ಷಣೆ ಕಾನೂನನ್ನು ಪರಿಷ್ಕರಿಸುವ ಮೂಲಕ ಗೋಶಾಲೆಗಳು ಕಸಾಯಿಖಾನೆಗಳಾಗದಂತೆ ನೋಡಿಕೊಳ್ಳಬೇಕು ಹಾಗೂ ಭ್ರಷ್ಟಾಚಾರವನ್ನು ನಿಯಂತ್ರಿಸಬೇಕು ಎಂದವರು ಆಗ್ರಹಿಸಿದರು.
ಹಸುಗಳನ್ನು ವಧಿಸುತ್ತಿದ್ದಾರೆ ಎಂದು ಕಾರಣವೊಡ್ಡಿ ‘ಗೋ ರಕ್ಷಕರು’ ಅಮಾಯಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಇದರಿಂದ ದೇಶದಲ್ಲಿ ಭಯ ಮತ್ತು ಭೀತಿಯ ವಾತಾವರಣ ನೆಲೆಸಿದೆ. ಆದರೆ, ಹರ್ಯಾನ, ರಾಜಸ್ತಾನ ಮತ್ತು ಛತ್ತೀಸ್‌ಗಡದಂತಹ ಬಿಜೆಪಿ ಆಡಳಿತದ ರಾಜ್ಯಗಳ ಗೋಶಾಲೆಗಳಲ್ಲಿ ಗೋಮಾತೆಯನ್ನು ಕ್ರೂರರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ. ಸರಕಾರದ ಅನುದಾನವನ್ನು ಭ್ರಷ್ಟರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದವರು ಆರೋಪಿಸಿದರು.
ಛತ್ತೀಸ್‌ಗಡದ ದರ್ಗ್ ಎಂಬಲ್ಲಿ ಸ್ಥಳೀಯ ಬಿಜೆಪಿ ಮುಖಂಡನ ಮಾಲಕತ್ವದ ಸರಕಾರಿ ಅನುದಾನಿತ ಗೋಶಾಲೆಯಲ್ಲಿ ಮೂರು ದಿನಗಳಲ್ಲಿ 27 ಹಸುಗಳು ಮೃತಪಟ್ಟ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿರುವ ಘಟನೆ ಇತ್ತೀಚೆಗೆ ನಡೆದಿದೆ.







