ಸೊರಬ: ಕಸಬಾ ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಸೊರಬ, ಆ.23: ಸಾಚಾರ್ ವರದಿಯನ್ವಯ ಮುಸ್ಲಿಂ ಸಮುದಾಯ ಶಿಕ್ಷಣದಲ್ಲಿ ಹಿಂದುಳಿದಿದ್ದು ಸರ್ಕಾರಗಳು ಮುಸ್ಲಿಂ ಜನಾಂಗದ ಶೈಕ್ಷಣಿಕ ಹಿತದೃಷ್ಟಿಯಿಂದ ಹೆಚ್ಚನ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಅಂಜುಮನ್ ಇಸ್ಲಾಹುಲ್ ಕಮಿಟಿ ಜಾಮೀಯಾ ಮಸೀದಿಯ ಅಧ್ಯಕ್ಷ ಎಂ.ಬಶೀರ್ ಅಹ್ಮದ್ ಹೇಳಿದ್ದಾರೆ.
ಬುಧವಾರ ಪಟ್ಟಣದ ರೇಡಿಯನ್ಸ್ ಶಾಲೆಯ ಆವರಣದಲ್ಲಿ ಕಸಬಾ ಉರ್ದು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮುಸ್ಲಿಂ ಸಮುದಾಯದಲ್ಲಿ ಕೆಲವರು ಮಾತ್ರ ಉನ್ನತ ಶಿಕ್ಷಣವನ್ನು ಪಡೆದು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ ಕಾರಣಾಂತರದಿಂದಾಗಿ ಹೆಚ್ಚಿನವರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ಮಕ್ಕಳ ಚಲನ-ವಲನದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು ಎಂದು ಕಿವಿಮಾತು ಹೇಳಿದ ಅವರು, ಶಿಕ್ಷಣವು ಮಕ್ಕಳ ಹಕ್ಕಾಗಿದ್ದು ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ಕೊಡಿಸುವಲ್ಲಿ ಜಾಗೃತಿವಹಿಸಬೇಕು ಎಂದರು.
ಬಿಆರ್‍ಪಿ ಶೇಖರ್ ನಾಯ್ಕ್ ಮಾತನಾಡಿ, ನಾವು ಮಕ್ಕಳಿಗಾಗಿ ಆಸ್ತಿ ಮಾಡುವ ಬದಲಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನು ಸಮಾಜದ ಆಸ್ತಿಯನಾಗಿ ಮಾದಬೇಕು. ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮತ್ತು ಸಂಸ್ಕಾರವಂತರನ್ನಾಗಿ ಮಾಡುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರ ಮೇಲೆ ಸಾಕಷ್ಟಿದೆ. ಪ್ರತಿ ಮಕ್ಕಳಲ್ಲೂ ಪ್ರತಿಭೆಗಳಿರುತ್ತವೆ. ಮಕ್ಕಳ ಪ್ರತಿಭೆಗೆ ಅನುಗುಣವಾಗಿ ಪೋಷಕರು ಹಾಗೂ ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮವನ್ನು ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಬೀಬಿ ಝುಲೇಖಾ ಉದ್ಘಾಟಿಸಿದರು. ಪ್ರಮುಖರಾದ ಯೂಸುಫ್ ಸಾಬ್ ಅಂಕರವಳ್ಳಿ, ಮುಹಮ್ಮದ್ ಶಾಬುಲಾಲ್, ಎನ್.ನೂರ್ ಅಹ್ಮದ್, ಝೈನುಲ್ಲಾಬಿದೀನ್, ಸುಜಾಯತ್‍ವುಲ್ಲಾ, ಉರ್ದು ಶಿಕ್ಷಣ ಸಂಯೋಜಕ ಬಷೀರ್ ಕೋಡ್, ಉರ್ದು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಫೀ ಅಹ್ಮದ್, ಆನವಟ್ಟಿ ಸಿಆರ್‍ಪಿ ಅಬುಸಯೀದ್, ಶಿಕ್ಷಕ ಮುಹಮ್ಮದ್ ಯಾಸೀನ್ ಮತ್ತಿತರರಿದ್ದರು.







