ದೊಳ್ಳಿಪುರ: ಶಿಕ್ಷಕರನ್ನು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರಿಂದ ಧರಣಿ

ಚಾಮರಾಜನಗರ, ಆ. 23: ತರಗತಿಯಲ್ಲಿ ವಿದ್ಯಾರ್ಥಿಗಳ ಮುಂದೆ ಇಬ್ಬರು ಶಿಕ್ಷಕರು ಚಪ್ಪಲಿಯಲ್ಲಿ ಹೊಡೆದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಕೊಂಡ ಪ್ರಕರಣಕ್ಕೆ ಸಂಬಂಧ ಇಬ್ಬರು ಶಿಕ್ಷಕರನ್ನ ಅಮಾನತ್ತುಪಡಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ದೊಳ್ಳಿಪುರ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಬುಧವಾರ ಧರಣಿ ನಡೆಸಿದ ಪ್ರಸಂಗ ನಡೆದಿದೆ.
ದೊಳ್ಳಿಪುರ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾಗಿರುವ ಚಂದ್ರು ಮತ್ತು ನಾಗೇಶ್ ವೈಯುಕ್ತಿಕ ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಶನಿವಾರ ಮಕ್ಕಳ ಮುಂದೆ ಅವಾಚ್ಯ ಪದಗಳಿಂದ ನಿಂದಿಸಿಕೊಂಡು ಸಿದ್ದಯ್ಯನಪುರದ ಶಿಕ್ಷಕ ಚಂದ್ರು ತನ್ನ ಕಾಲಿನಲ್ಲಿದ್ದ ಚಪ್ಪಲಿಯಿಂದ ಒಡೆಯರಪಾಳ್ಯದ ಶಿಕ್ಷಕ ನಾಗೇಶ್‍ಗೆ ಹೊಡೆದ ಎನ್ನಲಾಗಿದೆ. ಇದನ್ನು ಶಾಲೆಯಲ್ಲಿದ್ದ ಮಕ್ಕಳು ನೋಡಿ ಕೂಗಿಕೊಂಡಿದ್ದಾರೆ. ಅಂದು ಇತರೇ ಶಿಕ್ಷಕರು ಶಾಲೆಗೆ ರಜೆ ಘೋಷಣೆ ಮಾಡಿ ಮಕ್ಕಳನ್ನು ಮನೆಗೆ ಕಳುಹಿಸಿದ್ದಾರೆ.
ವಿಷಯ ತಿಳಿದು ಪೋಷಕರು ಹಾಗೂ ಗ್ರಾಮಸ್ಥರು ಸೋಮವಾರ ಶಾಲೆಗೆ ಬಂದು ವಿಚಾರಿಸಲಾಗಿದೆ. ಘಟನೆ ನಡೆದಿರುವುದು ಖಾತರಿಯಾಗಿದೆ. ತಕ್ಷಣ ಎಸ್‍ಡಿಎಂಸಿ ಅಧ್ಯಕ್ಷರು ಹಾಗು ಪದಾಧಿಕಾರಿಗಳು ಗ್ರಾಮಸ್ಥರ ಸಭೆ ಕರೆದು ಶಾಲೆಗೆ ಬೀಗ ಜಡಿದು ಧರಣಿ ಮಾಡಲು ಮುಂದಾಗಿದ್ದಾರೆ. ಸ್ಥಳಕಾಗಮಿಸಿದ್ದ ಬಿಇಓ ಇಬ್ಬರು ಶಿಕ್ಷಕರ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿ. ಬಳಿಕ ತಪ್ಪಿಸ್ಥ ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜನೆ ಮಾಡುವ ಮೂಲಕ ಗ್ರಾಮಸ್ಥರ ಕೆಂಗೆಣ್ಣಿಗೆ ಗುರಿಯಾಗಿದ್ದರು. ಈ ಇಬ್ಬರು ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಲು ನಾವು ಬಿಡುವುದಿಲ್ಲ. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ, ಬಿಇಓ ಆಧೇಶ ಕಾಪಿಯನ್ನು ಹರಿದು ಹಾಕಿ, ಮುಖ್ಯ ಶಿಕ್ಷಕರ ಕೊಠಡಿಗೆ ಬೀಗ ಜಡಿದು ಬುಧವಾರ ಪ್ರತಿಭಟನೆ ಮುಂದಾದರು.
ಬಿಇಓಗೆ ತರಾಟೆ : ಮತ್ತೆ ಬುಧವಾರವು ಸಹ ಗ್ರಾಮಸ್ಥರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಶಾಲೆ ಅವರಣದಲ್ಲಿ ಧರಣಿ ನಡೆಸಿದರು. ಸ್ಥಳಗಕ್ಕಾಮಿಸಿದ ಬಿಇಓ ಲಕ್ಷ್ಮೀಪತಿಯನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ನೀವು ಸೋಮವಾರ ನಮ್ಮ ಗ್ರಾಮಕ್ಕೆ ಬಂದು ಅವರ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳುವ ಭರವಸೆ ನೀಡಿ. ಈಗ ನಿಯೋಜನೆ ಮಾಡಿದ್ದೀರಿ. ತಪ್ಪಿಸ್ಥರ ಶಿಕ್ಷಕರನ್ನು ಅಮಾನತ್ತುಪಡಿಸುವ ಬದಲು ಅವರಿಗೆ ಬದಲಿ ಶಾಲೆಯನ್ನು ತೋರಿಸಿದರೆ, ಬೇರೆ ಶಾಲೆಯಲ್ಲಿಯೂ ಸಹ ಅವರು ಇದೇ ಚಾಳಿಯನ್ನು ಮುಂದುವರಿಸುತ್ತಾರೆ. ಇವರನ್ನು ಅಮಾನತ್ತುಪಡಿಸ ಹೊರತು ಶಾಲೆಗೆ ನಮ್ಮ ಮಕ್ಕಳನ್ನು ಕಳುಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಇಓ ಅವರು ತಕ್ಷಣಕ್ಕೆ ಅವರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಲಾಗಿದೆ. ಡಿಡಿಪಿಐಗೆ ವರದಿ ನೀಡಿದ್ದೇನೆ. ಅವರ ಬೆಂಗಳೂರಿನಲ್ಲಿದ್ದಾರೆ. ಬರುತ್ತಿದ್ದಂತೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಅಮಾನುತ್ತುಪಡಿಸುವ ಅಧಿಕಾರ ನನಗೆ ಇಲ್ಲ. ಮಕ್ಕಳಿಗೆ ಶಾಲೆ ನಡೆಸಲು ಅವಕಾಶ ಮಾಡಿಕೊಡಿ. ಇಬ್ಬರು ಶಿಕ್ಷಕರು ನಿಮ್ಮ ಗ್ರಾಮದ ಶಾಲೆಗೆ ಬರದಂತೆ ನೋಡಿಕೊಳ್ಳುತ್ತೇವೆ ಎಂದರು.
ಸ್ಥಳಕ್ಕೆ ಪುಟ್ಟರಂಗಶೆಟ್ಟಿ ಧೌಡು: ಕಾಗಲವಾಡಿ ಶಾಲೆಯಲ್ಲಿ ಸೈಕಲ್ ವಿತರಣೆ ಮಾಡುತ್ತಿದ್ದ ಸ್ಥಳೀಯ ಶಾಸಕ ಸಿ. ಪುಟ್ಟರಂಗಶೆಟ್ಟಿ ಧರಣಿ ಮಾಡುತ್ತಿರುವ ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿ, ಪೋಷಕರು ಹಾಗೂ ಗ್ರಾಮಸ್ಥರ ಮನವೊಲಿಸಿ, ಮುಖ್ಯ ಶಿಕ್ಷಕರ ಕೊಠಡಿಯ ಬಾಗಿಲು ತೆಗೆಸುವಲ್ಲಿ ಯಶಸ್ವಿಯಾದರು.
ಅತ್ಯಂತ ಹಿಂದುಳಿದ ಉಪ್ಪಾರ ಹಾಗೂ ಪರಿಶಿಷ್ಠ ಜಾತಿ ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಯನ್ನು ನಾವೇ ಬಿಗ ಹಾಕಿಕೊಳ್ಳುವುದು ಸರಿಯಲ್ಲ. ಇಬ್ಬರು ಶಿಕ್ಷಕರು ತರಗತಿ ವೇಳೆಯಲ್ಲಿ ಮಕ್ಕಳ ಮುಂದೆ ಗಲಾಟೆ ಮಾಡಿಕೊಂಡಿರುವುದು ಅಕ್ಷಮ್ಯ ಅಪರಾಧ. ಇಂಥ ಶಿಕ್ಷಕರು ನಮ್ಮ ಕ್ಷೇತ್ರದ ವ್ಯಾಪ್ತಿಯ ಶಾಲೆಯಲ್ಲಿ ಇರಲು ಬಿಡುವುದಿಲ್ಲ. ಅವರು ಅಮಾನತ್ತುಗೊಳ್ಳಬೇಕು. ಜೊತೆಗೆ ಇತರೇ ಜಿಲ್ಲೆ ಹಾಗೂ ತಾಲೂಕಿಗೆ ವರ್ಗಾವಣೆ ಶಿಕ್ಷೆಯಾಗಬೇಕು. ಈಗಾಗಲೇ ಡಿಡಿಪಿಐ ಮಂಜುಳಾ ಅವರೊಂದಿಗೆ ಮಾತನಾಡಿದ್ದೇನೆ. ಬಿಇಓ ಅವರು ಸಹ ಸೂಕ್ತವಾದ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಸಮಾಧಾನ ಪಡಿಸಿದರು.
ಇದನ್ನೇ ದೊಡ್ಡದುಮಾಡಿಕೊಂಡು ನಮ್ಮ ಮಕ್ಕಳ ಶಿಕ್ಷಣಕ್ಕೆ ಕಲ್ಲು ಹಾಕಿಕೊಳ್ಳುವುದು ತರವಲ್ಲ. ಮಕ್ಕಳು ಶಾಲೆಗೆ ಬಂದು ಪಾಠಪ್ರವಚನ ಕಲಿಯಬೇಕು. ಶಾಲೆಗೆ ಬೀಗ ಜಡಿದರೆ ಶಿಕ್ಷಕರಿಗೆ ಸಂಬಳ ನಿಲ್ಲುವುದಿಲ್ಲ. ನಮ್ಮ ಮಕ್ಕಳಿಗೆ ಶಿಕ್ಷಣ ಮೊಟಕುತ್ತದೆ ಎಂದು ಬುದ್ದಿಮಾತು ಹೇಳಿ, ಮಕ್ಕಳಿಗೆ ಪಾಠ ಪ್ರವಚನ ಮಾಡಿಕೊಂಡು ಹೋಗುವಂತೆ ಇನ್ನುಳಿದ ಮುಖ್ಯಶಿಕ್ಷಕರು ಹಾಗೂ ಸಹ ಶಿಕ್ಷಕರಿಗೆ ಪುಟ್ಟರಂಗಶೆಟ್ಟಿ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ಪುಟ್ಟಸ್ವಾಮಿ ಇದ್ದರು.
ಧರಣಿಯಲ್ಲಿ ದೊಳ್ಳಿಪುರ ಗ್ರಾ.ಪಂ. ಸದಸ್ಯ ಕೃಷ್ಣಶೆಟ್ಟಿ, ಎಸ್‍ಡಿಎಂಸಿ ಅಧ್ಯಕ್ಷ ರಾಚಶೆಟ್ಟಿ, ಸದಸ್ಯರಾದ ಸ್ವಾಮಿಮರಿ, ರಾಜಮ್ಮ, ತಮ್ಮಯ್ಯಶೆಟ್ಟಿ, ಸಾಕಮ್ಮ, ಪುಟ್ಟಸಿಮ್ಮ, ಯ. ಯವುಶೆಟ್ಟಿ, ಬಸವಶೆಟ್ಟಿ, ಶಿವಸ್ವಾಮಿ, ಸಾಕಮ್ಮ, ಹಾರೋಶೆಟ್ಟಿ, ವೆಂಕಟಶೆಟ್ಟಿ, ಶಿವಣ್ಣಶೆಟ್ಟಿ, ವೆಂಕಟೇಶ್, ರೇವಣ್ಣ, ಮಾದಶೆಟ್ಟಿ ಮೊದಲಾದವರು ಇದ್ದರು.







