ನ್ಯಾಯಾಲಯಕ್ಕೆ ಸುಳ್ಳು ಪ್ರಮಾಣ ಪತ್ರ ಸಲ್ಲಿಕೆ ದೂರು: ಉತ್ತರಿಸಲು ಕೇಜ್ರಿವಾಲ್‌ಗೆ ಹೈಕೋರ್ಟ್ ಸೂಚನೆ

ಹೊಸದಿಲ್ಲಿ, ಆ.23: ನ್ಯಾಯಾಲಯಕ್ಕೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಸಲ್ಲಿಸಿರುವ ಅರ್ಜಿಯ ಬಗ್ಗೆ ನಾಲ್ಕು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ದಿಲ್ಲಿ ಹೈಕೋರ್ಟ್ ಕೇಜ್ರೀವಾಲ್‌ಗೆ ಸೂಚಿಸಿದೆ.
ತನ್ನ ವಿರುದ್ಧ ಅವಹೇಳನಾತ್ಮಕ ಪದಗಳನ್ನು ಬಳಸುವಂತೆ ವಕೀಲರಿಗೆ ಸೂಚಿಸಿಲ್ಲ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ನ್ಯಾಯಾಲಯಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಜೇಟ್ಲಿ ದಿಲ್ಲಿ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದ ಸಂದರ್ಭ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದರು ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಜೇಟ್ಲಿ, ಕೇಜ್ರೀವಾಲ್ ಸೇರಿದಂತೆ ಐವರು ಆಪ್ ಮುಖಂಡರ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ಸಂದರ್ಭ ಜೇಟ್ಲಿ ಪರ ವಕೀಲರಾದ ರಾಮ್ ಜೇಠ್ಮಲಾನಿ ಅವಹೇಳನಕರ ಪದ ಬಳಸಿದ್ದರು ಎನ್ನಲಾಗಿದೆ. ಆದರೆ ಈ ಪದ ಬಳಸಲು ತಾನು ಸೂಚಿಸಿಲ್ಲ ಎಂದು ನ್ಯಾಯಾಲಯಕ್ಕೆ ಕೇಜ್ರೀವಾಲ್ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಕೇಜ್ರೀವಾಲ್ ಹೇಳಿಕೆ ಸರಿಯಲ್ಲ ಎಂದು ರಾಮ್ ಜೇಠ್ಮಲಾನಿ ಹೇಳಿಕೆ ನೀಡಿರುವ ಕಾರಣ ಕೇಜ್ರೀವಾಲ್ ಸಲ್ಲಿಸಿರುವ ಪ್ರಮಾಣಪತ್ರ ಸರಿಯಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೇಟ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ.
ಕೇಜ್ರಿ ವಿರುದ್ಧ ಕ್ರಿಮಿನಲ್ ಒಳಸಂಚು ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ನೀಡುವಂತೆ ಜೇಟ್ಲಿ ಪರ ವಕೀಲರಾದ ರಾಜೀವ್ ನಯ್ಯರ್ ಹಾಗೂ ಸಂದೀಪ್ ಸೇಥಿ ನ್ಯಾಯಾಲಯವನ್ನು ಒತ್ತಾಯಿಸಿದರು.







