ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಕ್ಕೆ ರೂನಿ ವಿದಾಯ

ಲಂಡನ್, ಆ.23: ಇಂಗ್ಲೆಂಡ್‌ನ ಸಾರ್ವಕಾಲಿಕ ಶ್ರೇಷ್ಠ ಗೋಲ್ ಸ್ಕೋರರ್ ವೇಯ್ನೋ ರೂನಿ ಬುಧವಾರ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
31ರ ಹರೆಯದ ರೂನಿ ಇಂಗ್ಲೆಂಡ್‌ನ ಪರ ಆಡಿರುವ 119 ಪಂದ್ಯಗಳಲ್ಲಿ 53 ಗೋಲುಗಳನ್ನು ಬಾರಿಸಿ ದಾಖಲೆ ನಿರ್ಮಿಸಿದ್ದರು. ಮಂಗಳವಾರ ತಂಡದ ಮ್ಯಾನೇಜರ್ ಗಾರೆತ್ ಸೌತ್‌ಗೇಟ್‌ಗೆ ಫೋನ್ ಮುಖಾಂತರ ನಿವೃತ್ತಿಯ ನಿರ್ಧಾರವನ್ನು ತಿಳಿಸಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ಮಾಲ್ಟಾ ಹಾಗೂ ಸ್ಲೋವಾಕಿಯ ವಿರುದ್ಧದ 2018ರ ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಇಂಗ್ಲೆಂಡ್ ತಂಡದಲ್ಲಿ ಆಡುವ ಅವಕಾಶವಿದ್ದರೂ ಅದನ್ನು ನಯವಾಗಿ ತಿರಸ್ಕರಿಸಿದ ರೂನಿ ನಿವೃತ್ತಿ ಘೋಷಿಸಿದ್ದಾರೆ. ‘‘ಕಳೆದ ವಾರ ನನಗೆ ದೂರವಾಣಿ ಕರೆ ಮಾಡಿದ್ದ ಗಾರೆತ್ ಮುಂಬರುವ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡಕ್ಕೆ ತನ್ನನ್ನು ಮತ್ತೆ ಸೇರಿಸಿಕೊಳ್ಳುವುದಾಗಿ ತಿಳಿಸಿದ್ದರು. ಇದಕ್ಕಾಗಿ ನಾನು ಅವರನ್ನು ಶ್ಲಾಘಿಸುವೆ. ತುಂಬಾ ಯೋಚಿಸಿದ ಬಳಿಕ ಗಾರೆತ್ ಅವರಲ್ಲಿ ನಿವೃತ್ತಿಯ ನಿರ್ಧಾರವನ್ನು ತಿಳಿಸಿದ್ದೇನೆ. ಇದು ನಿಜವಾಗಿಯೂ ಕಠಿಣ ನಿರ್ಧಾರ. ಇಂಗ್ಲೆಂಡ್ ಪರ ಆಡುವುದು ನನ್ನ ಪಾಲಿಗೆ ಯಾವಾಗಲೂ ವಿಶೇಷ. ಪ್ರತಿಬಾರಿ ಆಟಗಾರ ಇಲ್ಲವೇ ನಾಯಕನಾಗಿ ಆಯ್ಕೆಯಾಗಿರುವುದು ನನಗೆ ಲಭಿಸಿದ ಗೌರವ ಎಂದು ಭಾವಿಸಿದ್ದೇನೆ. ನನಗೆ ಸಹಾಯ ಮಾಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ’’ ಎಂದು ರೂನಿ ಹೇಳಿದ್ದಾರೆ.
‘‘ಎವರ್ಟನ್ ತಂಡ ಟ್ರೋಫಿ ಜಯಿಸಲು ನೆರವಾಗುವುದು ಈಗ ನನ್ನ ಮುಂದಿರುವ ಏಕೈಕ ಗುರಿಯಾಗಿದೆ. ಯುನೈಟೆಡ್ ಮ್ಯಾಂಚೆಸ್ಟರ್ ತಂಡವನ್ನು ತ್ಯಜಿಸಿರುವುದು ಕಠಿಣ ನಿರ್ಧಾರವಾಗಿತ್ತು. ಎವರ್ಟನ್ ತಂಡವನ್ನು ಸೇರ್ಪಡೆಯಾಗಿರುವುದು ನನ್ನ ಸರಿಯಾದ ನಿರ್ಧಾರ’’ ಎಂದು ರೂನಿ ಹೇಳಿದ್ದಾರೆ.
ರೂನಿ 2003ರಲ್ಲಿ ತನ್ನ 17ನೆ ವಯಸ್ಸಿಯಲ್ಲಿ ಆಸ್ಟ್ರೇಲಿಯದ ವಿರುದ್ಧ ಚೊಚ್ಚಲ ಪಂದ್ಯ ಆಡಿದ್ದರು. 2004ರಲ್ಲಿ 18ರ ಹರೆಯದಲ್ಲಿ ಪ್ರಮುಖ ಟೂರ್ನಿ ಯುರೋ ಕಪ್‌ನ್ನು ಆಡಿದ್ದ ರೂನಿ ಕಳೆದ ವರ್ಷ ಸ್ಕಾಟ್ಲೆಂಡ್ ವಿರುದ್ಧ ವಿಂಬ್ಲಿಯಲ್ಲಿ ನಡೆದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ನಾಯಕನಾಗಿ ತಂಡದ ಪರ ಕೊನೆಯ ಪಂದ್ಯ ಆಡಿದ್ದರು.
ಮ್ಯಾಂಚೆಸ್ಟರ್ ಸಿಟಿ ವಿರುದ್ಧ ಪಂದ್ಯದಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ 200ನೆ ಗೋಲು ಬಾರಿಸಿದ 2 ದಿನಗಳ ಬಳಿಕ ರೂನಿ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. 200ನೆ ಗೋಲು ಬಾರಿಸಿದ ಬಳಿಕ ಎವರ್ಟನ್ ತಂಡದತ್ತ ಹೆಚ್ಚು ಗಮನ ನೀಡುವುದಾಗಿ ಹೇಳಿದ್ದ ರೂನಿ ಅಂತಾರಾಷ್ಟ್ರೀಯ ಪಂದ್ಯದಿಂದ ನಿವೃತ್ತಿಯಾಗುವ ಸುಳಿವು ನೀಡಿದ್ದರು.
ರೂನಿ 2014ರ ಫಿಫಾ ವಿಶ್ವಕಪ್‌ನಲ್ಲಿ ಉರುಗ್ವೆ ವಿರುದ್ಧ 75ನೆ ನಿಮಿಷದಲ್ಲಿ ಗೋಲು ಬಾರಿಸಿದ್ದರು. ಈಮೂಲಕ ವಿಶ್ವಕಪ್‌ನಲ್ಲಿ ಮೊತ್ತ ಮೊದಲ ಗೋಲು ಬಾರಿಸಿದ್ದರು. ವಿಶ್ವಕಪ್‌ನಲ್ಲಿ ಗ್ರೂಪ್ ಹಂತದಲ್ಲೇ ಹೊರಬಿದ್ದಿದ್ದ ಇಂಗ್ಲೆಂಡ್‌ನ ಪ್ರದರ್ಶನದ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಆದಾಗ್ಯೂ ಕಳೆದ ಹಲವು ವರ್ಷಗಳಿಂದ ಇಂಗ್ಲೆಂಡ್ ತಂಡಕ್ಕೆ ರೂನಿ ಅವರ ಕೊಡುಗೆ ಅಪಾರ. ಸ್ವಾರ್ಥರಹಿತವಾಗಿ ಆಡುತ್ತಿದ್ದ ರೂನಿ ಅವರ ಬದ್ಧತೆ ಪ್ರಶ್ನಾತೀತವಾಗಿತ್ತು.







