ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ

ದಾವಣಗೆರೆ, ಆ.23: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಜಿಲ್ಲಾ ಸಂಚಾಲಕ ಹೆಗ್ಗರೆ ರಂಗಪ್ಪ ಮಾತನಾಡಿ, ಕಳೆದ ಅನೇಕ ದಶಕಗಳಿಂದ ಜಿಲ್ಲೆಯಲ್ಲಿ ಭೂಮಿ ಮತ್ತು ವಸತಿ ಯೋಜನೆಯ ಸಾವಿರಾರು ಸಮಸ್ಯೆಗಳು ಜೀವಂತವಾಗಿವೆ. ಇದರಿಂದ ಬಡವರು ದಿನನಿತ್ಯವೂ ಪರಿತಪಿಸುತ್ತಿದ್ದಾರೆ. ಇಂಥಹ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೂಡಲೇ ಉನ್ನತಾಧಿಕಾರಿಗಗಳ ಸಮಿತಿ ರಚನೆ ಮಾಡಬೇಕೆಂದು ಎಂದು ಆಗ್ರಹಿಸಿದರು.
ಕಳೆದ ಅನೇಕ ದಶಕಗಳಿಂದ ಜನರು ಉಳುಮೆ ಮಾಡಿಕೊಂಡು ಬರುತ್ತಿರುವ ಹಾಗೂ ವಾಸಿಸುತ್ತಿರುವ ಭೂಮಿ ಹಾಗೂ ವಸತಿ ಜಾಗವನ್ನು ಅವರಿಗೆ ಮಂಜೂರು ಮಾಡಬೇಕು. ಅನಿವಾರ್ಯವಾದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಅರಣ್ಯಭೂಮಿ ಮಂಜೂರು ಮಾಡಲು ಇರುವ ಕಾನೂನು ತೊಡಕುಗಳನ್ನು ತೆಗೆದುಹಾಕಿ ಯಾವುದೇ ನಿರ್ಭಂದಗಳಿಲ್ಲದೆ ಭೂಮಿ ಮಂಜೂರು ಮಾಡಬೇಕು ಹಾಗೂ ಜಿಲ್ಲೆಯ ಎಲ್ಲ ಶ್ರಮಿಕ ನಗರ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಧರಣಿಯಲ್ಲಿ ಅನೀಸ್ ಪಾಷ, ಸತೀಶ್ ಅರವಿಂದ್,ಮೌಲಾನಾಯ್ಕ, ಎಚ್.ಮಲ್ಲೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.







