ಅಮೆರಿಕ: ಭಾರತ ಮೂಲದ ಸಿಇಒಗೆ ಜನಾಂಗೀಯ ನಿಂದನೆ
‘‘ನೀನೊಬ್ಬ ..... ಭಾರತೀಯ ಹಂದಿ’’ ಎಂದು ನಿಂದಿಸಿದ ಮಹಿಳೆ

ನ್ಯೂಯಾರ್ಕ್, ಆ. 23: ಶಾರ್ಲಟ್ಸ್‌ವಿಲ್‌ನಲ್ಲಿ ನಡೆದ ಹಿಂಸಾಚಾರದ ಬಳಿಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆರ್ಥಿಕ ಕಾರ್ಯಸೂಚಿಯನ್ನು ತಾನು ಬೆಂಬಲಿಸುವುದಿಲ್ಲ ಎಂದು ಪ್ರತಿಪಾದಿಸಿ ಪತ್ರಿಕೆಯೊಂದರಲ್ಲಿ ಲೇಖನವೊಂದನ್ನು ಬರೆದ ಭಾರತ ಮೂಲದ ಸಿಇಒ ಒಬ್ಬರನ್ನು ಜನಾಂಗೀಯವಾಗಿ ನಿಂದಿಸಲಾಗಿದೆ.
‘‘ಟ್ರಂಪ್‌ರ ಆರ್ಥಿಕ ಕಾರ್ಯಸೂಚಿಯ ಕೆಲವು ಅಂಶಗಳನ್ನು ನಾನು ಬೆಂಬಲಿಸುತ್ತೇನೆ ಎಂಬುದಾಗಿ ಇತ್ತೀಚೆಗೆ ನಾನು ‘ನ್ಯೂಯಾರ್ಕ್ ಟೈಮ್ಸ್’ಗೆ ಹೇಳಿದ್ದೆ. ಆದರೆ, ಶಾರ್ಲಟ್ಸ್‌ವಿಲ್ ಹಿಂಸಾಚಾರದ ಬಳಿಕ, ‘ಡೋ’ ಕಂಪೆನಿಯ ಶೇರುಗಳು 50,000 ಡಾಲರ್ ತಲುಪಿದರೂ, ನಿರುದ್ಯೋಗ 1 ಶೇಕಡಕ್ಕೆ ಇಳಿದರೂ ಮತ್ತು ಒಟ್ಟು ದೇಶಿ ಉತ್ಪನ್ನ 7 ಶೇಕಡದಷ್ಟು ಏರಿಕೆಯಾದರೂ ನಾನು ಟ್ರಂಪ್‌ರನ್ನು ಸಮರ್ಥಿಸುವುದಿಲ್ಲ. ಕೆಲವು ವಿಷಯಗಳು ಆರ್ಥಿಕತೆಯನ್ನೂ ಮೀರುತ್ತವೆ. ತನ್ನ ಹಾಗೆ ಕಾಣದ ಅಮೆರಿಕನ್ನರನ್ನು ದ್ವೇಷಿಸುತ್ತಿರುವಂತೆ ಕಾಣುವ ಅಧ್ಯಕ್ಷರನ್ನು ನಾನು ಉತ್ತಮ ಮನಸ್ಸಿನಿಂದ ಬೆಂಬಲಿಸಲಾರೆ’’ ಎಂಬುದಾಗಿ ಜಿಎಂಎಂ ನಾನ್‌ಸ್ಟಿಕ್ ಕೋಟಿಂಗ್ಸ್ ಕಂಪೆನಿಯ ಸಿಇಒ ರವಿನ್ ಗಾಂಧಿ ‘ಸಿಎನ್‌ಬಿಸಿ’ಯಲ್ಲಿ ಬರೆದಿದ್ದಾರೆ.
ಅದರ ಬಳಿಕ, ಇಮೇಲ್ ಮತ್ತು ಟ್ವಿಟರ್‌ನಲ್ಲಿ ರವಿನ್ ಮೇಲೆ ಜನಾಂಗೀಯ ದಾಳಿ ನಡೆಸಲಾಗಿದೆ. ಓರ್ವ ಮಹಿಳೆಯು ರವೀನ್‌ರನ್ನು ‘‘ನೀನೊಬ್ಬ ..... ಭಾರತೀಯ ಹಂದಿ’’ ಎಂಬುದಾಗಿ ವಾಯ್ಸಿಮೇಲ್‌ನಲ್ಲಿ ನಿಂದಿಸಿದ್ದಾಳೆ. ಅದನ್ನು ರವಿನ್ ‘ಯೂಟ್ಯೂಬ್’ನಲ್ಲಿ ಹಾಕಿದ್ದಾರೆ.
ಆ ಮಹಿಳೆ ಮುಂದುವರಿಯುತ್ತಾ, ‘‘ತೊಟ್ಟಿಯಲ್ಲಿರುವ ನಿನ್ನ ವಸ್ತುಗಳನ್ನು ಹಿಡಿದುಕೊಂಡು ಭಾರತಕ್ಕೆ ವಾಪಸ್ ಹೋಗು. ಅಲ್ಲಿ ಅದನ್ನು ಮಾರಾಟ ಮಾಡು’’ ಎಂದು ಹೇಳುತ್ತಾಳೆ.





