ಹೊನ್ನಮಾರನಹಳ್ಳಿ: ಸದ್ಭಾವನಾ ದಿನಾಚರಣೆ, ಗಿಡನೆಡುವ ಕಾರ್ಯಕ್ರಮ

ಹಾಸನ, ಆ. 23: ಪ್ರಕೃತಿಯನ್ನು ನಾವು ಪೋಷಿಸಿದರೆ ಅದು ನಮ್ಮನ್ನು ಸದಾ ಪೊರೆಯುತ್ತದೆ. ಇಂದಿನ ಬರಗಾಲದ ಸ್ಥಿತಿಗೆ ನಾವು ಪ್ರಕೃತಿಯನ್ನು ನಾಶಮಾಡಿರುವುದೇ ಪ್ರಮುಖ ಪಾತ್ರವಾಗಿ ಕಾಡುತ್ತಿದೆ. ನಾವು ಹಾಗೂ ನಮ್ಮ ಮುಂದಿನ ಪೀಳಿಗೆಯವರ ಬದುಕು ಹಸನಾಗಿರಬೇಕೆಂದರೆ ಪರಿಸರವನ್ನು ಕಾಪಾಡುವುದರ ಜೊತೆಗೆ ಪಾಕೃತಿಕ ಅರಿವು ಹಾಗೂ ಗಿಡಗಳನ್ನು ನೆಡುವುದು, ಪೋಷಿಸುವುದು ಹಾಗೂ ಜಾಗರೂಕತೆಯಿಂದ ಬೆಳೆಸುವುದು ಪ್ರತಿಯೊಬ್ಬರ ಆಧ್ಯಕರ್ತವ್ಯವಾಗಬೇಕೆಂದು ಕರ್ನಾಟಕ ರಾಜ್ಯ ರೈತ ಹಿತಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಯು.ಸಿ.ಮಹೇಂದ್ರರವರು ಅಭಿಪ್ರಾಯಪಟ್ಟರು.
ಅವರು ಹಾಸನ ತಾಲ್ಲೂಕಿನ ದುದ್ದ ಹೋಬಳಿ ಹೊನ್ನಮಾರನಹಳ್ಳಿಯಲ್ಲಿ ದುದ್ದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಮತ್ತು ಏಕಲವ್ಯ ರೋವರ್ ಮುಕ್ತದಳದಿಂದ ಹಮ್ಮಿಕೊಂಡಿದ್ದ ಸದ್ಭಾವನಾ ದಿನಾಚರಣೆ ಹಾಗೂ ಗಿಡನೆಡುವ ಕಾರ್ಯಕ್ರಮದ ಉದ್ಘಾನೆಮಾಡಿ ಮಾತನಾಡಿ ಹಾಸನ ಜಿಲ್ಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಹಾಗೂ ಸ್ಥಳೀಯ ಸಂಸ್ಥೆಗಳು ಈ ನಿಟ್ಟಿನಲ್ಲಿ ಅನುಕರಣೀಯ ಕಾರ್ಯಮಾಡುತ್ತಿವೆ ಎಂದರು.
ಜಿಲ್ಲಾ ತರಬೇತಿ ಆಯುಕ್ತರಾದ ಎಂ.ಎಸ್.ಪ್ರಕಾಶ್ ಮಾತನಾಡಿ ಮಕ್ಕಳಲ್ಲಿ ಚಿಕ್ಕವಯಸ್ಸಿನಿಂದಲೇ ಪ್ರಕೃತಿ ಪ್ರೇಮವನ್ನು ಬೆಳೆಸಬೇಕು. ಈ ಮುಖೇನ ಪರಿಸರ ಜಾಗೃತಿ ಮಾಡಿಸುತ್ತಾ ಮಕ್ಕಳಲ್ಲಿ ಉತ್ತಮ ಸಾಮಾಜಿಕ ಮೌಲ್ಯಗಳನ್ನು ವೃದ್ಧಿಸಲು ಸಹಾಯಕವಾಗುತ್ತದೆ ಎಂದರು.
ಗೈಡ್ ಕ್ಯಾಪ್ಟನ್ ಬಿ.ಎಸ್.ವನಜಾಕ್ಷಿ ಮಾತನಾಡಿ ಪರಿಸರ ಕಾಳಜಿ ಹುಟ್ಟಿದ ಪ್ರತಿಯೊಬ್ಬ ಮಾನವನಿಗೂ ಅನಿವಾರ್ಯ ಏಕೆಂದರೆ ನಾವುಗಳು ಜೀವಿಸಿರುವುದೇ ಈ ಪರಿಸರದಲ್ಲಿ. ಉತ್ತಮ ಪರಿಸರವನ್ನು ಕಾಪಾಡಿಕೊಂಡರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಪರಿಸರ ಕೆಡಿಸಿಕೊಂಡರೆ ನಮ್ಮ ಆರೋಗ್ಯವೂ ಹಾಳಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 200 ಕ್ಕೂ ಹೆಚ್ಚು ಗಿಡಗಳನ್ನು ಹೊನ್ನಮ್ಮ ದೇವಾಲಯ ಆವರಣದಲ್ಲಿ ನೆಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ಕಾಂಚನಮಾಲ, ಏಕಲವ್ಯ ರೋವರ್ ಮುಕ್ತ ದಳದ ನಾಯಕ ಆರ್.ಜಿ.ಗಿರೀಶ್, ಗ್ರಾ.ಪಂ ಸದಸ್ಯೆ ಶುಭಾ, ನಿವೃತ್ತ ಶಿಕ್ಷಕ ಗುಂಡಪ್ಪ, ಶಿಕ್ಷಕಿಯರಾದ ಪೂರ್ಣಿಮಾ, ಉಮಾವತಿ, ಭೀಮವ್ವ, ಅಸ್ಮಾ, ವಿದ್ಯಾರ್ಥಿಗಳು ಹಾಜರಿದ್ದರು.







