ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಸ್ಪರ್ಧಿಸಬೇಕು: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ, ಆ.23: ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಸ್ಪರ್ಧಿಸಿ ಗೆದ್ದು ಈ ಕ್ಷೇತ್ರಕ್ಕೆ ಕೀರ್ತಿ ತರುಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕ್ರೀಡಾಪಟುಗಳಿಗೆ ಸಲಹೆ ನೀಡಿದರು.
ಪಟ್ಟಣದ ಮಿನಿಕ್ರೀಡಾಂಗಣದಲ್ಲಿ ಜಿ.ಪಂ, ತಾ.ಪಂ, ಯುವ ಸಬಲೀಕರಣ, ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಒಂದು ಕ್ಷೇತ್ರವನ್ನು ಕ್ರೀಡೆಗಳ ಮೂಲಕವೂ ಸಹ ಗುರುತಿಸಬಹುದು, ಕ್ರೀಡಾರ್ತಿಗಳು ತಮ್ಮ ಪಠ್ಯದ ಜೊತೆಗೆ ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸುವುದರಿಂದ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಬಹುದು ಎಂದ ಅವರು, ಈ ಕ್ರೀಡಾಂಗಣಕ್ಕೆ ಇನ್ನೂ ಅನೇಕ ಮೂಲಭೂತ ಸೌಲಭ್ಯಗಳ ಅಗತ್ಯವಿದ್ದು, ಸೌಲಭ್ಯಗಳ ಪಟ್ಟಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿ, ಇದಕ್ಕೆ ಬೇಕಾಗಿರುವ ಅನುದಾನವನ್ನು ಸರ್ಕಾರದಿಂದ ಬಿಡುಗಡೆಗೊಳಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ತಾ.ಪಂ ಅಧ್ಯಕ್ಷ ನರೇಂದ್ರಬಾಬು ಮಾತನಾಡಿ, ನಮ್ಮ ಕ್ಷೇತ್ರವು ಆರ್ಥಿಕವಾಗಿ ಹಿಂದುಳಿದಿದ್ದರೂ ಕ್ರೀಡಾ ಕ್ಷೇತ್ರದಲ್ಲಿ ಮಾತ್ರ ಮುಂದಿದೆ. ಇತ್ತೀಚಿಗೆ ನಡೆದ ಜಿಲ್ಲಾ ಕ್ರೀಡಾಕೂಟದಲ್ಲಿ ಪವನ್ ಎಂಬ ಕ್ರೀಡಾಪಟುವು ಓಟ ಸ್ಪರ್ಧೆಯಲ್ಲಿ ಚಾಂಪಿಯನ್ ಗಳಿಸಿದರುವುದು ಇದಕ್ಕೆ ನಿರ್ದಶನವಾಗಿದೆ. ಪ್ರತಿಯೊಬ್ಬರೂ ಹೆಚ್ಚಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯದಜೊತೆಗೆ ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಎಚ್.ವಿ.ನಾಗರಾಜ್, ಜಿ.ಪಂ ಸದಸ್ಯ ಲಕ್ಷ್ಮೀನರಸಿಂಹಪ್ಪ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ್, ಯಲ್ಲಂಪಲ್ಲಿ ವಿಎಸ್ ಎಸ್‍ಎನ್ ಅಧ್ಯಕ್ಷ ಯರ್ರಕಿಟ್ಟಪ್ಪ, ಪಾಚೇಪಲ್ಲಿ ನಾಗರಾಜ್‍ರೆಡ್ಡಿ, ದೈಹಿಕ ಶಿಕ್ಷಕ ಪರವೀಕ್ಷಕ ವಿ.ಜಯರಾಮ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯ ಅಧಿಕಾರಿ ಮುಸ್ತಾಕ್ ಅಹ್ಮದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ, ದೈಹಿಕ ಶಿಕ್ಷಕರಾದ ನಟರಾಜ್, ಎಚ್.ವೆಂಕಟೇಶ್, ಅಂಜನಪ್ಪ, ವಿಜಯಕುಮಾರ್, ದೇವಮ್ಮ ಮತ್ತಿತರರು ಉಪಸ್ಥಿತರಿದ್ದರು.







