ಜಾಮೀನು ಪಡೆದು ಹೊರಬಂದು ಸೇನೆಯಲ್ಲಿ ಕರ್ತವ್ಯಕ್ಕೆ ಹಾಜರಾದ ಕರ್ನಲ್ ಪುರೋಹಿತ್

ಮುಂಬೈ, ಆ.23: ಮಾಲೆಗಾಂವ್‌ನಲ್ಲಿ 2008ರಲ್ಲಿ ಸಂಭವಿಸಿದ್ದ ಬಾಂಬ್‌ಸ್ಫೋಟ ಪ್ರಕರಣದ ಆರೋಪಿಯಾಗಿ ಕಳೆದ 9 ವರ್ಷಗಳಿಂದ ಜೈಲಿನಲ್ಲಿದ್ದ ಸೇನೆಯ ಗುಪ್ತಚರ ವಿಭಾಗದ ಅಧಿಕಾರಿ ಲೆಪ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಜಾಮೀನು ಮೇಲೆ ಬಿಡುಗಡೆ ಹೊಂದಿದ ಕೆಲವೇ ಗಂಟೆಗಳಲ್ಲಿ ದಕ್ಷಿಣ ಮುಂಬೈಯಲ್ಲಿರುವ ಕೊಲಾಬ ಮಿಲಿಟರಿ ಕೇಂದ್ರದಲ್ಲಿ ಕರ್ತವ್ಯಕ್ಕೆ ಹಾಜರಾದರು.
ಭಯೋತ್ಪಾದಕತೆ ಆರೋಪದಲ್ಲಿ ಅವರನ್ನು ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಭಯೋತ್ಪಾದಕ ನಿಗ್ರಹ ದಳ(ಎಟಿಎಸ್) ಬಂಧಿಸಿತ್ತು. ಕರ್ತವ್ಯದಲ್ಲಿದ್ದಾಗ ಎಟಿಎಸ್‌ನಿಂದ ಬಂಧಿಸಲ್ಪಟ್ಟಿರುವ ಪ್ರಪ್ರಥಮ ಭಾರತೀಯ ಸೇನಾಧಿಕಾರಿ ಆಗಿರುವ ಪುರೋಹಿತ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ಪುರಸ್ಕರಿಸಿತ್ತು. ಮಂಗಳವಾರ ಮುಂಬೈ ಸೆಷನ್ಸ್ ನ್ಯಾಯಾಲಯದಲ್ಲಿ ಸ್ಥಾಪಿಸಲಾಗಿರುವ ರಾಷ್ಟ್ರೀಯ ತನಿಖಾ ಮಂಡಳಿ (ಎನ್‌ಐಎ) ನ್ಯಾಯಾಲಯದಲ್ಲಿ ಜಾಮೀನು ಪ್ರಕ್ರಿಯೆ ಪೂರ್ಣಗೊಂಡಿತು. ಬಳಿಕ ಪುರೋಹಿತ್‌ರನ್ನು ಸೆರೆಯಲ್ಲಿಟ್ಟಿದ್ದ ಜೈಲಿನ ಹೊರಗೆ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು.
ಆದರೆ ಬುಧವಾರ ಎರಡು ಮಿಲಿಟರಿ ಜೀಪ್‌ಗಳು, ಒಂದು ಕಾರು ಹಾಗೂ ಎರಡು ಟ್ರಕ್‌ಗಳನ್ನೊಳಗೊಂಡ ವಾಹನದ ಸಾಲು ಜೈಲಿನೊಳಗೆ ಪ್ರವೇಶಿಸಿದಾಗ ಹೊರಗೆ ಕಾದು ನಿಂತಿದ್ದ ಪುರೋಹಿತ್ ಬಂಧುಮಿತ್ರರು ಹಾಗೂ ಪತ್ರಕರ್ತರು ಅಚ್ಚರಿಗೊಂಡರು. ಬಳಿಕ ಬೆಂಗಾವಲು ಪಡೆಯೊಂದಿಗೆ ಜೈಲಿನಿಂದ ಹೊರಬಂದ ಪುರೋಹಿತ್, ಮುಗುಳ್ನಗುತ್ತಾ ಜನರತ್ತ ಕೈಬೀಸಿದರು. ಆದರೆ ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದರು.
ಆದರೂ ಪಟ್ಟುಬಿಡದ ಮಾಧ್ಯಮದವರು ನಿಮ್ಮ ಮುಂದಿನ ಯೋಜನೆ ಏನು ಎಂದು ಕೇಳಿದಾಗ- ಜೈಹಿಂದ್, ನನಗೆ ಗೊತ್ತಿಲ್ಲ. ಇತರರ ನಿರ್ಧಾರವನ್ನು ಅದು ಅವಲಂಬಿಸಿದೆ ಎಂದಷ್ಟೇ ಉತ್ತರಿಸಿದರು.
ಬಳಿಕ ಪುಣೆಯನ್ನು ಕೇಂದ್ರ ಕಚೇರಿಯನ್ನಾಗಿ ಹೊಂದಿರುವ ಭಾರತೀಯ ಸೇನೆಯ ದಕ್ಷಿಣ ಕಮಾಂಡ್ ಕೇಂದ್ರದೊಳಗೆ ಪ್ರವೇಶಿಸಿದ ಕಪುರೋಹಿತ್‌ರನ್ನು ಸ್ವಾಗತಿಸಿದ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಬಳಿ ಅವರನ್ನು ಕರೆದೊಯ್ದರು. ಪುರೋಹಿತ್‌ರನ್ನು ಎಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರ ವಕೀಲ ಶ್ರೀಕಾಂತ್ ಶಿವಾಡೆ ಹೇಳಿದ್ದಾರೆ.







