ಚೀನೀ ಸ್ಮಾರ್ಟ್‌ಫೋನ್‌ಗಳಿಂದ ಭಾರತೀಯರ ದತ್ತಾಂಶ ಕಳವು?
’ಡೋಕಾ ಲಾ ಬಿಕ್ಕಟ್ಟಿಗೆ ಚೀನಾದ ಹೊಸ ಕುತಂತ್ರ’

ಹೊಸದಿಲ್ಲಿ, ಆ. 23: ಡೋಕಾ ಲಾ ವಿಷಯ ಕುರಿತ ಭಾರತ ಹಾಗೂ ಚೀನಾದ ನಡುವಿನ ಬಿಕ್ಕಟ್ಟು ಸಸ್ತ್ರಾಶ್ತ್ರ ಸಂಘರ್ಷಕ್ಕೆ ಕಾರಣವಾಗದೇ ಇರಬಹುದು. ಆದರೂ ಭಾರತ-ಚೀನ ಯುದ್ಧ ನಡೆಯುತ್ತಲೇ ಇದೆ. ವಿಶೇಷ ರಣರಂಗದಲ್ಲಿ ನಡೆಯುವ ಈ ಯುದ್ಧದಲ್ಲಿ ಭಾರತ ಚೀನದ ವಿರುದ್ಧ ಹೋರಾಡುತ್ತಿದೆ. ಆ ರಣ ರಂಗವೇ ನಿಮ್ಮ 5 ಇಂಚಿನ ಮೊಬೈಲ್ ಪರದೆ.
ಹೆಚ್ಚಿನ ಭಾರತೀಯರು ಚೀನಾ ನಿರ್ಮಿತ ಮೊಬೈಲ್ ಫೋನ್ ಬಳಸುತ್ತಿದ್ದಾರೆ. ಆದರೆ, ತಮ್ಮ ಮೊಬೈಲ್ ಫೋನ್ ರಣರಂಗವಾಗಿ ಹೇಗೆ ಬದಲಾಗುತ್ತಿದೆ ಎಂಬುದು ಅವರಿಗೆ ತಿಳಿದೇ ಇಲ್ಲ.
ಚೀನಾ ಸ್ಮಾರ್ಟ್‌ಫೋನ್ ಕಂಪೆನಿ ಭಾರತೀಯ ಬಳಕೆದಾರರ ವಿವರವನ್ನು ಚೀನಾಕ್ಕೆ ಕಳುಹಿಸುತ್ತಿದೆ ಎಂದು ಟೊರೊಂಟೊ ವಿಶ್ವವಿದ್ಯಾನಿಲಯದ ಸಂಶೋಧನಾ ವರದಿ ಸೇರಿದಂತೆ ಅನೇಕ ವರದಿಗಳು ಹೇಳಿದ ಬಳಿಕ ಭಾರತ ಸರಕಾರ ಚೀನಾ ಕಂಪೆನಿಗಳ ವಿರುದ್ಧ ಕ್ರಮ ಕೈಗೊಂಡಿತ್ತು. ಚೀನಾ ಸ್ಮಾರ್ಟ್‌ಫೋನ್ ಕಂಪೆನಿಗಳು ರವಾನಿಸಿದ ಭಾರತೀಯ ಬಳಕೆದಾರರ ದತ್ತಾಂಶಗಳನ್ನು ಚೀನಾ ವಾಣಿಜ್ಯ ಹಾಗೂ ವ್ಯೆಹಾತ್ಮಕ ಉದ್ದೇಶಗಳಿಗೆ ದುರ್ಬಳ ಮಾಡಿಕೊಳ್ಳುವ ಸಾಧ್ಯತೆ ಇದೆ.
ದತ್ತಾಂಶ ಸೋರಿಕೆ ಹಾಗೂ ಕಳವಿನ ವರದಿ ಹಿನ್ನೆಲೆಯಲ್ಲಿ ಭಾರತದಲ್ಲಿ ಮಾರಾಟ ಮಾಡುವ ಮೊಬೈಲ್ ಫೋನ್‌ಗಳ ಭದ್ರತಾ ಖಾತರಿಗೆ ಅನುಸರಿಸುವ ಪ್ರಕ್ರಿಯೆ ಹಾಗೂ ಕಾರ್ಯ ವಿಧಾನದ ಕುರಿತು ಮಾಹಿತಿ ನೀಡುವಂತೆ ಚೀನಾ ಕಂಪೆನಿಗಳೇ ಹೆಚ್ಚಿರುವ 21 ಸ್ಮಾರ್ಟ್‌ಫೋನ್ ಕಂಪೆನಿಗಳಿಗೆ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿರ್ದೇಶಿಸಿತ್ತು.
ಹೆಚ್ಚಿನ ಚೀನಾ ನಿರ್ಮಿತ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆಗಳ ಸರ್ವರ್‌ಗಳು ಚೀನಾದಲ್ಲಿ ಇವೆ. ಭದ್ರತಾ ಉಲ್ಲಂಘನೆಯ ಹಿನ್ನೆಲೆಯಲ್ಲಿ ಬಳಕೆದಾರರ ದತ್ತಾಂಶ ರಕ್ಷಣೆಗೆ ಖಾತರಿ ನೀಡುವ ಮುಂದಿನ ಹೆಜ್ಜೆಯಾಗಿ ಭಾರತದಲ್ಲಿ ಸರ್ವರ್‌ಗಳನ್ನು ಸ್ಥಾಪಿಸುವಂತೆ ಚೀನಾ ಮೊಬೈಲ್ ತಯಾರಕರಿಗೆ ಸರಕಾರ ಆದೇಶಿಸಿದೆ.
ದತ್ತಾಂಶ ಪಡೆದುಕೊಂಡ ಚೀನ ಅದನ್ನು ವಾಣಿಜ್ಯ ಉದ್ದೇಶಕ್ಕಾಗಿ ದುರ್ಬಳಕೆ ಮಾಡಿಕೊಳ್ಳಬಹುದು. ಅಲ್ಲದೆ ಭಾರತದ ಮೇಲೆ ಸೈಬರ್ ದಾಳಿಗೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂಬುದು ಭಾರತಕ್ಕೆ ಅತಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ.





